
ನಾಪೋಕ್ಲು ಜ.24 NEWS DESK : ಹೊದವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ ನಡೆಯಿತು. ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಅವರ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಮಾತನಾಡಿ, ಮಕ್ಕಳು ಶಿಕ್ಷಣವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ಓದುವ ವಯಸ್ಸಿನಲ್ಲಿ ಇತರ ಯಾವುದೇ ಆಕರ್ಷಣೆಗಳಿಗೆ ಒಳಗಾಗಬಾರದು. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳು ಯಾವುದೇ ದೌರ್ಜನಕ್ಕೆ ಒಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು. ಜಿಲ್ಲಾ ಮಹಿಳಾ ಮಿಷನ್ ಶಕ್ತಿ ಸಂಯೋಜಕಿ ಮಮತಾ ಮಾತನಾಡಿ, ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ಬಳಿಕ ವಿವಾಹ ನೆರವೇರಿಸಬೇಕು ಎಂದರು. ಈ ಯೋಜನೆಯು ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ ಎಂದರು. ಕಾರ್ಯಕರ್ಮದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕುಸುಮಾವತಿ, ಸದಸ್ಯ ಹಮೀದ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವತ್ಸಲ, ಮೂರ್ನಾಡು ಕ್ಲಸ್ಟರ್ ಕೇಂದ್ರದ ಸಿ ಆರ್ ಪಿ ಉಷಾ, ಹೊದವಾಡ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶೋಕ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ.ರಾಧಮ್ಮ, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಾದ ಸುಮಾ, ತುಳಸಿ, ಶೃತಿ, ಶೋಭಾ, ಅಂಬ್ರಿನ ಹಾಗೂ ಶಾಲಾ ಶಿಕ್ಷಕರ, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ದುಗ್ಗಳ ಸದಾನಂದ









