
ನಾಪೋಕ್ಲು ಜ.24 NEWS DESK : ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ 2025-26ನೇ ಸಾಲಿನ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮವು ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲಿಕಾ ಹಬ್ಬ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಮೇಕೇರಿ ಕ್ಲಸ್ಟರ್ ಸಿಆರ್ಪಿ ಯವರಾದ ಕಲ್ಪನಾ ಮಾತನಾಡಿ, ಇಂದು ಆಚರಿಸುತ್ತಿರುವುದು ಶಿಕ್ಷಣೋತ್ಸವವಾಗಿದ್ದು ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕೆಯ ಮೂಲಕ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಲು ಸಹಾಯಕವಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದಾಯಕವೆಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭ ವಿವಿಧ ಚಟುವಟಿಕೆಗಳನ್ನು ನಡೆಸಿ ವಿಜೇತರದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಆರ್‍ಪಿ ಮಂಜುಳಾ ಚಿತ್ರಾಪುರ, ಮೇಕೇರಿ ಗ್ರಾಮ ಪಂಚಾಯತ್ ಪಿಡಿಒ ಮಮತಾ ಹಾಕತ್ತೂರು, ಗ್ರಾಮ ಪಂಚಾಯತ್ ಪಿಡಿಒ ಗೀತಾಂಜಲಿ, ಪಂಚಾಯತ್ ಸದಸ್ಯರಾದ ಸುಶೀಲ ಮಧು ಹಾಗೂ ವಿವಿಧ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸಬಿತಾ ಹಾಗೂ ಕಾರ್ಯಕ್ರಮದಲ್ಲಿ ಕ್ಲಸ್ಟರ್ ನ 9 ಶಾಲೆಗಳ ಸುಮಾರು 110 ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ









