
ಮಡಿಕೇರಿ NEWS DESK ಜ.24 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ‘ಫಲಪುಷ್ಪ ಪ್ರದರ್ಶನ’ ಕಣ್ಮನ ಸೆಳೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ‘ಫಲಪುಷ್ಪ ಪ್ರದರ್ಶನ’ವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 33 ಅಡಿ ಎತ್ತರದಲ್ಲಿ 18 ಅಡಿ ಉದ್ದ, 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾದ ಕೊಡಗಿನ ಪ್ರಸಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನದ ಕಲಾಕೃತಿ ನೋಡುಗರನ್ನು ಸೆಳೆಯುತ್ತಿವೆ. ಸುಮಾರು 8 ಸಾವಿರ ಕುಂದಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್‍ಗಳಲ್ಲಿ ಸುಮಾರು 20 ಸಾವಿರ ವಿವಿಧ ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರಗಳ ಕಲಾಕೃತಿ, ತಬಲಾ, ಪಿಯಾನೊ ಹರ್ಪ್, ಗಣರಾಜ್ಯೋತ್ಸವದ ಅಂಗವಾಗಿ ಅಮರ್ ಜವಾನ್, ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಬ್ಲೂವೇ, ಮಿಕ್ಕಿ ಮೌಸ್, ಡೊರೇಮ್ಯಾನ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ.













