
ಚೆಟ್ಟಳ್ಳಿ ಜ.28 NEWS DESK : ಚೆಟ್ಟಳ್ಳಿಯ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಜೆ ವಲಯ ಶ್ರೇಷ್ಠಗುರುಗಳಾದ ಡೋಮಿನಿಕ್ ಜೇಮ್ಸ್ ಅವರ ನೇತೃತ್ವದಲ್ಲಿ ಹಾಗೂ ಒಂಬತ್ತು ಧರ್ಮಗುರುಗಳ ಸಾನ್ನಿಧ್ಯದಲ್ಲಿ ದೇವಾಲಯದಲ್ಲಿ ಭವ್ಯ ಧಾರ್ಮಿಕ ಬಲಿಪೂಜೆ ನೆರವೇರಿತು. ನಂತರ ಸಂತರ ಭವ್ಯ ತೇರು ಮೆರವಣಿಗೆ, ಸಾಮೂಹಿಕ ಗೀತೆಗಳು ಹಾಗೂ ಪ್ರಾರ್ಥನೆಯೊಂದಿಗೆ ಚೆಟ್ಟಳ್ಳಿ ಪಟ್ಟಣದಿಂದ ದೇವಾಲಯದವರೆಗೆ ಭಕ್ತಿಭಾವದಿಂದ ಮೆರವಣಿಗೆ ನಡೆಯಿತು. ಬಳಿಕ ಪರಮ ಪ್ರಸಾದದ ಭವ್ಯ ಆಶೀರ್ವಾದದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಹಬ್ಬದ ಅಂಗವಾಗಿ ಸಾಮೂಹಿಕ ಭೋಜನ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದ್ದು, ಭಕ್ತರು ಸಹಭೋಜನದಲ್ಲಿ ಭಾಗವಹಿಸಿದರು.
ಹಬ್ಬದ ಎಲ್ಲಾ ಕಾರ್ಯಕ್ರಮಗಳು ಚೆಟ್ಟಳ್ಳಿ ಚರ್ಚ್‌ನ ಧರ್ಮಗುರುಗಳಾದ ಫಾದರ್ ಜೆರಾಲ್ಡ್ ಸಿಕ್ವೇರಾ ಅವರ ಮಾರ್ಗದರ್ಶನದಲ್ಲಿ ಹಾಗೂ ಪಾಲನಾ ಸಮಿತಿಯ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನೆರವೇರಿದವು. ಈ ಸಂದರ್ಭ ಧಾರ್ಮಿಕ ಕನ್ಯಾಸ್ತ್ರೀಯರು, ಹತ್ತಿರದ ವಿವಿಧ ಚರ್ಚುಗಳಿಂದ ಆಗಮಿಸಿದ ಕ್ರೈಸ್ತ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.








