
ನಾಪೋಕ್ಲು ಜ.28 NEWS DESK : ಚೀಯಕ ಪೂವಂಡ ಕುಟುಂಬದ ವತಿಯಿಂದ ಏಪ್ರಿಲ್‍ನಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯ ಕೊಡವ ಕುಟುಂಬಗಳು ಪಾಲ್ಗೊಳ್ಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಕ್ರೀಡೆ ದಾಖಲಾಗಲು ಪ್ರಯತ್ನಿಸಬೇಕು ಎಂದು ಚೀಯಕ ಪೂವಂಡ ಕುಟುಂಬದ ಅಧ್ಯಕ್ಷ ಸಿ.ಎಂ.ಅಪ್ಪಚ್ಚು ಹೇಳಿದರು. ನಾಲ್ನಾಡು ಪ್ಲಾಂಟಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಏ.23 ರಿಂದ 26ರ ವರೆಗೆ 4 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದ ಯಶಸ್ವಿಗಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಕೂಟಕ್ಕೆ ಅಂದಾಜು 60 ಲಕ್ಷ ವೆಚ್ಚವಾಗಲಿದ್ದು, ಕುಟುಂಬವಾರು 20,000 ರೂ.ಧನಸಹಾಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಹಗ್ಗ ಜಗ್ಗಾಟ ಕ್ರೀಡಾ ಕೂಟದ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ಹಗ್ಗ ಜಗ್ಗಾಟ ಕ್ರೀಡಾಕೂಟದ ಯಶಸ್ಸಿಗೆ ಪರಸ್ಪರ ಸರ್ವರ ಸಹಕಾರ ಅಗತ್ಯ. ಜನಾಂಗದ ಕ್ರೀಡಾ ಅಭಿಮಾನಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಕ್ರೀಡೆ ದಾಖಲಾಗಲು ಸಹಕರಿಸಬೇಕು ಎಂದರು. ಕ್ರೀಡಾಕೂಟದ ಸಂಚಾಲಕ ಸಿ.ಡಿ.ನವೀನ್ ಮಾತನಾಡಿ, ಸ್ಪರ್ಧಾ ವಿಜೇತರಿಗೆ ಅತ್ಯಾಕರ್ಷಕ ವಿತರಿಸಲಾಗುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ ವಿಜೇತರಿಗೆ ಒಂದು ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದರು. ದ್ವಿತೀಯ ಬಹುಮಾನ 75,000 ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ 50 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ, ಚತುರ್ಥ ಬಹುಮಾನ ನಲವತ್ತು ಸಾವಿರ ಹಾಗೂ ಟ್ರೋಫಿ ಮತ್ತು 5ನೇ ಬಹುಮಾನವಾಗಿ 20 ಸಾವಿರ ರೂ. ನಗದು ಹಾಗೂ ಟ್ರೋಫಿ ವಿತರಿಸಲಾಗುವುದು ಎಂದರು. ಹದಿನಾರು ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ 20000 ಹಾಗೂ ಟ್ರೋಫಿ ವಿತರಿಸಲಾಗುವುದು. ದ್ವಿತೀಯ ಬಹುಮಾನ ವಿಜೇತರಿಗೆ 15000 ನಗದು ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನ ವಿಜೇತರಿಗೆ 10,000 ನಗದು ಹಾಗೂ ಟ್ರೋಫಿ ವಿತರಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಉಪಾಧ್ಯಕ್ಷ ಸಿ.ಎಸ್ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ಸಿ.ಎ ನಾಚಪ್ಪ, ಜಂಟಿ ಕಾರ್ಯದರ್ಶಿ ಸಿ.ಪಿ ಸಚಿನ್ ಮುತ್ತಪ್ಪ, ಖಜಾಂಚಿ ಸಿ ಯನ್ ಸತೀಶ್ ದೇವಯ್ಯ, ನಿರ್ದೇಶಕರಾದ ಸಿ ಆರ್ ಸಚಿನ್ ಫುವಯ್ಯ ,ಸಿ.ಎ ಸುನಿಲ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









