
ಕುಶಾಲನಗರ ಜ.29 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯಲ್ಲಿ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಘಟಕ, ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಎಂ.ಸಿ. ಸಮಿತಿಯ ಆಶ್ರಯದಲ್ಲಿ ಸ್ವಾತಂತ್ರ್ಯ ಭಾರತದ ಸೇನಾ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೆ.ಎಂ. ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಠ ಸೇವೆ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಎಂದರೆ ಒಂದು ರೀತಿ ಸ್ಪೂರ್ತಿ ಹಾಗೂ ಚಿಲುಮೆ. ಶಿಸ್ತಿನ ಸಿಪಾಯಿ ಆಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸದಾ ಹೇಳುತ್ತಿದ್ದ ರಾಷ್ಟ್ರ ಮೊದಲು, ನಂತರ ಉಳಿದ ಎಲ್ಲವೂ ಎಂಬ ತತ್ವವನ್ನು ನಾವೆಲ್ಲರೂ ಪರಿಪಾಲಿಸುವ ಮೂಲಕ ದೇಶವನ್ನು ಎಲ್ಲರೂ ಪ್ರೀತಿಸಬೇಕು ಎಂದು ಪ್ರೇಮಕುಮಾರ್ ಹೇಳಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಗೈಡ್ಸ್ ಶಿಕ್ಷಕಿ ಕೆ.ಟಿ.ಸೌಮ್ಯ ,ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ. ಉಷಾ ಹಾಗೂ ವಿದ್ಯಾರ್ಥಿ ನಾಯಕರು ಇದ್ದರು.









