



ಮಡಿಕೇರಿ ಜ.29 NEWS DESK : ಮೈಸೂರಿನಿಂದ ಕೊಡಗು ಜಿಲ್ಲೆಯ ಕುಶಾಲನಗರದವರೆಗಿನ ಉದ್ದೇಶಿತ ರೈಲು ಸಂಪರ್ಕ ಯೋಜನೆ ಸ್ಥಗಿತವಾಗಿಲ್ಲ, ಬದಲಾಗಿ ಹಿನ್ನಡೆಯಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ರಾಜ್ಯ ಸರಕಾರದ ವಿಳಂಬವೇ ಇದಕ್ಕೆ ಪ್ರಮುಖ ಕಾರಣವೆಂದು ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ಮಾರ್ಗದ ಈ ಯೋಜನೆ ಜಾರಿಯಾಗುವ ಪ್ರದೇಶಗಳಲ್ಲಿ ರಾಜ್ಯ ಸರಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿತ್ತು. ಆದರೆ ಸಾಕಷ್ಟು ಮನವಿ ಬಳಿಕವೂ ಭೂಸ್ವಾಧೀನ ನಡೆಸದೆ ವಿಳಂಬ ನೀತಿ ಅನುಸರಿಸಿದೆ ಎಂದು ಟೀಕಿಸಿದರು. ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ಯೋಜನೆ ಬಗ್ಗೆ ಮನವರಿಕೆ ಮಾಡಿ, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಕೋರಲಾಗುತ್ತದೆ. ಉದ್ದೇಶಿತ ರೈಲು ಸಂಪರ್ಕ ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವುದು ಯೋಜನೆ ವಿಳಂಬಕ್ಕೆ ಕಾರಣವಲ್ಲ. ಕೆಲವೊಮ್ಮೆ ಆರ್ಥಿಕ ಲಾಭ ನೋಡುವುದಕ್ಕಿಂತ ಉದ್ದೇಶಿತ ಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆ ಬಗ್ಗೆ ಗಮನ ನೀಡುವುದು ಮುಖ್ಯ ಎಂದು ಯದುವೀರ್ ಅಭಿಪ್ರಾಯಪಟ್ಟರು.













