




ಮಡಿಕೇರಿ NEWS DESK ಜ.29 : ಕೊಡಗು ಜಿಲ್ಲೆಯನ್ನು ನಿರಂತರವಾಗಿ ಕಾಡುತ್ತಿರುವ ವನ್ಯಜೀವಿ ಉಪಟಳದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಘೋಷಿಸಿ ತಕ್ಷಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾಧ್ಯಕ್ಷ ಅಣ್ಣ ಷರೀಪ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ. ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಿದ್ದಾಪುರ ಸಮೀಪದ ಗೌರಿಬೆಟ್ಟ ವ್ಯಾಪ್ತಿಯಲ್ಲಿ ಅಮಾಯಕ ಕಾರ್ಮಿಕನನ್ನು ಕಾಡಾನೆ ಬಲಿ ಪಡೆದಿದೆ. ಮೃತ ಲತೀಫ್ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಸರಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷö್ಯವೇ ಕಾರಣವೆಂದು ಆರೋಪಿಸಿದ್ದಾರೆ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ವನ್ಯಜೀವಿ ಉಪಟಳ ತೀವ್ರಗೊಂಡಿದೆ. ಆದರೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದರ ಪರಿಣಾಮ ಅಮಾಯಕ ಮಾನವ ಜೀವಗಳು, ಜಾನುವಾರುಗಳು ಬಲಿಯಾಗುತ್ತಿವೆ, ಅಲ್ಲದೆ ಕೃಷಿ ಫಸಲು ನಾಶವಾಗುತ್ತಿದೆ. ವನ್ಯಜೀವಿ ದಾಳಿ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದರೂ ಅರಣ್ಯ ಇಲಾಖೆ ಇಲ್ಲಿಯವರೆಗೆ ನವೀನ ಮಾದರಿಯ ವೈಜ್ಞಾನಿಕ ರೂಪದ ಪರಿಹಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತ ಲತೀಫ್ ಅವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಮತ್ತು ವನ್ಯಜೀವಿ ದಾಳಿ ತಡೆಗೆ ಈ ಬಾರಿಯ ಬಜೆಟ್ ನಲ್ಲಿ ಶಾಶ್ವತ ಯೋಜನೆ ಘೋಷಿಸಬೇಕು ಎಂದು ಒತ್ತಾಯಿಸಿರುವ ಅಣ್ಣ ಷರೀಪ್ ಹಾಗೂ ಅಬ್ದುಲ್ ರಜಾಕ್ ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.













