ಮಡಿಕೇರಿ NEWS DESK ಫೆ.8 : ಪ್ರಸಿದ್ಧ ಪ್ರವಾಸಿತಾಣ ಮಾಂದಲ್ ಪಟ್ಟಿಗೆ ತೆರಳುವ ಎಲ್ಲ ಬಾಡಿಗೆ ಜೀಪುಗಳಿಗೆ 2500ರೂ. ದರ ನಿಗದಿ ಮಾಡಲಾಗಿದೆ. ಪ್ರವಾಸಿಗರನ್ನು ಬಾಡಿಗೆ ಕರೆದೊಯ್ಯಲು ಬಿಳಿ ಬೋರ್ಡ್ ಜೀಪುಗಳಿಗೆ ಅವಕಾಶವಿಲ್ಲ ಎಂದು ಮಡಿಕೇರಿ ಜೀಪ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಪ್ರವಾಸಿಗರು ನೀಡಬಾರದು ಎಂದು ಮನವಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಜೀಪು ಚಾಲಕನೋರ್ವ ಪ್ರವಾಸಿಗರಿಂದ ದುಬಾರಿ ಹಣ ಪಡೆದಿರುವ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ವಿಚಾರದ ಕುರಿತು ಮಡಿಕೇರಿ ಮತ್ತು ನಂದಿಮೊಟ್ಟೆಯ ಜೀಪ್ ಮಾಲೀಕರ ಮತ್ತು ಚಾಲಕರ ಸಂಘಂದ ಸದಸ್ಯರ ಸಭೆ ನಡೆಸಿ ಏಕರೂಪದ ದರ ನಿಗದಿ ಮಾಡಲು ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಮಾಂದಲ್ ಪಟ್ಟಿಗೆ ಬಾಡಿಗೆಗೆ ತೆರಳುವ 200ಕ್ಕೂ ಅಧಿಕ ಜೀಪುಗಳಿವೆ. ವೇಗದ ಸಂಚಾರ ಮತ್ತು ಬಾಡಿಗೆ ಪೈಪೋಟಿ ನಿಯಂತ್ರಿಸಲು ಜೀಪು ನಿಲ್ದಾಣದಲ್ಲಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಅದೇ ಸ್ಥಳದಲ್ಲಿ ಬಾಡಿಗೆ ದರವನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಜೀಪುಗಳಿಗೆ ನೋಂದಣಿ ಸಂಖ್ಯೆಯನ್ನು ನೀಡಿದ್ದು, ಅಂತಹ ಬಾಡಿಗೆ ಜೀಪುಗಳಿಗೆ ಮಾತ್ರವೇ ಮಾಂದಲ್ ಪಟ್ಟಿಗೆ ತೆರಳಲು ಅವಕಾಶವಿದೆ. ಎಲ್ಲಾ ಜೀಪುಗಳು ಹಳದಿ ಬೋರ್ಡ್ ಹೊಂದಿದ್ದು, ಬಿಳಿ ಬೋರ್ಡ್ ಜೀಪುಗಳಿಗೆ ಬಾಡಿಗೆ ಕರೆದೊಯ್ಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯಿತಿಗೆ ಪಾರ್ಕಿಂಗ್ ಶುಲ್ಕವಾಗಿ 50 ರೂ. ಹಾಗೂ ಅರಣ್ಯ ಇಲಾಖೆಗೆ ಪ್ರವೇಶ ಶುಲ್ಕವಾಗಿ 50 ರೂ. ಮತ್ತು ಪ್ರತಿ ಪ್ರವಾಸಿಗರು ತಲಾ 50ರೂ. ಗಳನ್ನು ಅರಣ್ಯ ಇಲಾಖೆಗೆ ಪಾವತಿಸಬೇಕಿದೆ. ಇದನ್ನು ಪ್ರವಾಸಿಗರೇ ಭರಿಸಬೇಕು. ಇದೀಗ ಮಾಂದಲ್ ಪಟ್ಟಿ ವೀಕ್ಷಣೆಗೆ 1 ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಪ್ರತಿ ದಿನ ಬೆಳಗೆ 6 ಗಂಟೆಯಿಂದ ಸಂಜೆ 5.30ರವರೆಗೆ ಜೀಪುಗಳಲ್ಲಿ ಬಾಡಿಗೆ ತೆರಳಲು ಅವಕಾಶವಿದೆ. ಮಾಂದಲ್ ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳ ಬಗ್ಗೆ ಜೀಪು ಯೂನಿಯನ್ ಯಾವುದೇ ಅಭ್ಯಂತರ ಹೊಂದಿಲ್ಲ ಎಂದು ಉಣ್ಣಿಕೃಷ್ಣ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಜೀಪ್ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಜೆ.ಎಸ್.ವಿನೋದ್, ಗೌರವಾಧ್ಯಕ್ಷ ಜಾನ್ಸನ್, ಕಾರ್ಯದರ್ಶಿ ಹರೀಶ್, ನಂದಿಮೊಟ್ಟೆ ಜೀಪ್ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಜಿ.ಯು.ಉಮೇಶ್, ಪದಾಧಿಕಾರಿ ಚನ್ನಪಮಡ ದರ್ಶನ್ ಉಪಸ್ಥಿತರಿದ್ದರು.








