ಮಡಿಕೇರಿ NEWS DESK ಫೆ.10 : ಕಾರುಗುಂದದ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಫೆ.15 ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ ನಡೆಯಲಿದೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಂಬಾಣೆ ಗೌಡ ಯುವ ವೇದಿಕೆಯ ಅಧ್ಯಕ್ಷ ಪಾರೆಮಜಲು ಪ್ರದೀಪ್ ಹಾಗೂ ಕಾರ್ಯದರ್ಶಿ ಯಶವಂತ್ ಕೇಟೋಳಿ ಕ್ಯಾರಂಬೋರ್ಡ್ ಕ್ರೀಡಾಕೂಟ ಗೌಡ ಜನಾಂಗಗಳಿಗೆ ಸೀಮಿತವಾಗಿದ್ದು, ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ ನಡೆಯಲಿದೆ. 15 ವರ್ಷದೊಳಗಿನ ಮಕ್ಕಳು ಹಾಗೂ 15 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಡಬಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10 ಸಾವಿರ ರೂ ಮತ್ತು ದ್ವಿತೀಯ 5 ಸಾವಿರ ರೂ. ನೀಡಲಾಗುತ್ತದೆ. ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ. ಮತ್ತು ದ್ವಿತೀಯ 2,500 ರೂ. ನೀಡಲಾಗುವುದು ಎಂದರು. ಕಾರುಗುಂದ ಗೌಡ ಸಮಾಜದಲ್ಲಿ ನಡೆಯುವ ಕ್ರೀಡಾಕೂಟವನ್ನು ಬೆಳಿಗ್ಗೆ 9 ಗಂಟೆಗೆ ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ ಹಾಗೂ ರೀಡಿಂಗ್ ಎಡ್ಜ್ ಅಡ್ವರ್ಟೈಸ್ ಇಂಡಿಯಾ ಪ್ರೈವೆಟ್ ಲಿಮಿಟಡ್ ಸಂಸ್ಥೆಯ ಪ್ರಮುಖ ಎಡಿಕೇರಿ ಪ್ರಸನ್ನ ಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಕಾರುಗುಂದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಎಸ್.ಗಣಪತಿ ಅವರ ಅಧ್ಯಕ್ಷತೆಯಲ್ಲಿ ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪನಹಳ್ಳಿ ರವೀಂದ್ರ, ರೀಡಿಂಗ್ ಎಡ್ಜ್ ಅಡ್ವರ್ಟೈಸ್ ಇಂಡಿಯಾ ಪ್ರೈವೆಟ್ ಲಿಮಿಟಡ್ ಸಂಸ್ಥೆಯ ಪ್ರಮುಖ ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್, ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಹಾಗೂ ದಸರಾ ಕ್ರೀಡಾ ಸಮಿತಿಯ ಕಾರ್ಯದರ್ಶಿ ಕಾವೇರಿಮನೆ ಭರತ್ ಉಪಸ್ಥಿತರಿರುವರು.
*ಸನ್ಮಾನ*
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತ ಬಾಳಾಡಿ ದಿಲೀಪ್ ಕುಮಾರ್ ಹಾಗೂ ಸ್ಟಾರ್ ಆಫ್ ಮೈಸೂರು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಡ್ಲೇರ ತುಳಸಿ ಮೋಹನ್ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಪಾರೆಮಜಲು ಪ್ರದೀಪ್ ಹಾಗೂ ಯಶವಂತ್ ಕೇಟೋಳಿ ಮಾಹಿತಿ ನೀಡಿದರು.
ಸರ್ವ ಗೌಡ ಜನಾಂಗ ಬಾಂಧವರು ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
*ಏಪ್ರಿಲ್ ನಲ್ಲಿ ಕ್ರಿಕೆಟ್*
ಚೇರಂಬಾಣೆ ಗೌಡ ಯುವ ವೇದಿಕೆಯ ನಿರ್ದೇಶಕ ಕೂರನ ಪ್ರವೀಣ್ ಮಾತನಾಡಿ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 3ರಿಂದ 5 ರವರೆಗೆ ನಡೆಯಲಿದೆ ಎಂದರು. ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಬೆಟ್ಟಗೇರಿ, ಆವಂದೂರು, ಅರವತ್ತೊಕ್ಲು, ಅಪ್ಪಂಗಳ, ತಾಳತ್ತಮನೆ, ಕಾರುಗುಂದ, ಕಡಿಯತ್ತೂರು, ಕೊಟ್ಟೂರು, ಬಕ್ಕ, ಬೆಟ್ಟತ್ತೂರು, ಕೊಳಗದಾಳು, ಚೇರಂಬಾಣೆ, ಬೇಂಗೂರು, ಬಿ.ಬಾಡಗ, ಕೋಪಟ್ಟಿ, ಚರಂದೆಟ್ಟಿ, ಸಿಂಗತ್ತೂರು, ಕೋರಂಗಾಲ, ಭಾಗಮಂಡಲ, ಕರಿಕೆ, ಸಣ್ಣ ಪುಲಿಕೋಟು, ದೊಡ್ಡ ಪುಲಿಕೋಟು, ಮರಗೋಡು, ಕಾಂತೂರು, ಬಿಳಿಗೇರಿ, ಮೇಕೇರಿ, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಕುಂಬಳದಾಳು ಗ್ರಾಮಗಳ ಗೌಡ ಜನಾಂಗದ ಆಟಗಾರರಿಗೆ ಬಿಡ್ಡಿಂಗ್ ಆಧಾರದಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ಎಂದರು. ಪ್ರವೇಶ ಶುಲ್ಕ 10 ಸಾವಿರ ರೂ. ನಿಗಧಿ ಮಾಡಲಾಗಿದ್ದು, ಬಿಡ್ಡಿಂಗ್ ಶುಲ್ಕ ರೂ.500 ಆಗಿದೆ. ಪ್ರಥಮ ಬಹುಮಾನ 50 ಸಾವಿರ ರೂ. ಮತ್ತು ಟ್ರೋಫಿ, ದ್ವಿತೀಯ ಬಹುಮಾನ 30 ಸಾವಿರ ರೂ. ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ಟ್ರೋಫಿಯನ್ನು ನೀಡಲಾಗುವುದು ಎಂದು ಕೂರನ ಪ್ರವೀಣ್ ತಿಳಿಸಿದರು. ಕ್ಯಾರಂಬೋರ್ಡ್ ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು 8296755464, 9448667293 ನ್ನು ಸಂಪರ್ಕಿಸಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚೇರಂಬಾಣೆ ಗೌಡ ಯುವ ವೇದಿಕೆಯ ಖಜಾಂಚಿ ನಿಖಿಲ್ ಕೊಡಪಾಲು, ನಿರ್ದೇಶಕರುಗಳಾದ ಮುಕ್ಕಾಟಿ ನಮಿತ್ ಹಾಗೂ ಕೂರನ ಜೀವನ್ ಉಪಸ್ಥಿತರಿದ್ದರು.









