ಕುಶಾಲನಗರ, NEWS DESK ಫೆ.14 : ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಒಕ್ಕೂಟದ ವತಿಯಿಂದ ಪುಲ್ವಾಮದಲ್ಲಿ ಹುತಾತ್ಮ ರಾದ ಸೈನಿಕರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು.
ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಗ್ರರ ಸಂಚಿಗೆ ಬಲಿಯಾದ 44 ಮಂದಿ ಯೋಧರ ಭಾವ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಪುಲ್ವಾಮದ ಘಟನೆಯಲ್ಲಿ ಅಸುನೀಗಿದ ವೀರ ಸೇನಾನಿಗಳ ಕುಟುಂಬದೊಂದಿಗೆ ದೇಶದ ಜನರು ಇದ್ದಾರೆ.
ಘಟನೆಯ ಬಳಿಕ ದೇಶದ ಸೈನಿಕರು ಉಗ್ರರಿಗೆ ತಕ್ಕಪಾಠ ಕಲಿಸುವ ಮೂಲಕ 250 ಮಂದಿ ಉಗ್ರರನ್ನು ಸದೆಬಡಿಯುವ ಮೂಲಕ ಭಾರತೀಯ ಸೈನಿಕರ ಪರಾಕ್ರಮ ತೋರಿಸಿರುವುದು ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು. ಕುಶಾಲನಗರ ತಾಲ್ಲೂಕಿನ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭದ್ರತೆ ಹಾಗು ಸುರಕ್ಷತೆಯ ವಿಚಾರದಲ್ಲಿ ದೇಶದ ಗಡಿಗಳನ್ನು ಕಾಯುವ ಸೈನಿಕರ ಸೇವೆ ಹಾಗೂ ತ್ಯಾಗ ಅನನ್ಯವಾದುದು. ಹುತಾತ್ಮ ಯೋಧರ ಶ್ರದ್ದಾಂಜಲಿ ಕಾರ್ಯಕ್ರಮ ಸಾರ್ವಜನಿಕರಿಂದ ನಡೆಯುವಂತಾಗಬೇಕು ಎಂದು ಆಶಿಸಿದರು. ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ದೇಶ ಸೇವೆಗಾಗಿ ತಮ್ಮ ಇಡೀ ಸುಂದರ ಆಯಸ್ಸು ಹಾಗೂ ಭವಿಷ್ಯವನ್ನು ಪಣಕ್ಕಿಡುವ ಯೋಧರ ಸೇವೆ ಬೆಲೆ ಕಟ್ಟಲಾಗದು ಎಂದರು.
ದಿಕ್ಸೂಚಿ ಭಾಷಣಕಾರ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಮಾತನಾಡಿ, ದೇಶ ಸೇವೆಯಲ್ಲಿ ಕೃಷಿಕ, ಸೈನಿಕ ಹಾಗೂ ಶಿಕ್ಷಕನ ಪಾತ್ರ ಅಪಾರವಾದುದು.
ಕೃಷಿಕ ಅನ್ನ ಬೆಳೆಯದೆ ಕೈಬಿಟ್ಟರೆ ದೇಶದ ಜನ ಮಣ್ಣು ತಿನ್ನಬೇಕಾಗುತ್ತದೆ. ಗಡಿ ಕಾಯುವ ಸೈನಿಕ ಮೈಮರೆತರೆ ದೇಶದ ವಾಸಿಗಳು ಮಣ್ಣು ಸೇರಬೇಕಾಗುತ್ತದೆ ಎಂದರು. ಕುಶಾಲನಗರದ ಹಿರಿಯ ನಾಗರಿಕ ಎಂ.ಹೆಚ್.ನಜೀರ್ ಅಹಮದ್ ಮಾತನಾಡಿ, ಹುತಾತ್ಮ ಸೈನಿಕರು ದೇಶ ಸೇವೆಗಾಗಿ ಸತ್ತು ಬದುಕಿದ್ದಾರೆ. ಆದರೆ ದೇಶದ್ರೋಹಿಗಳು, ಧರ್ಮದ್ರೋಹಿಗಳು ಬದುಕಿದ್ದರೂ ಕೂಡ ಸತ್ತಂತೆ ಎಂದರು. ಕುಶಾಲನಗರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮಾತನಾಡಿ, ಗಡಿ ಕಾಯುವ ದೇಶದ ಸೈನಿಕ ನಿವಾಸಿಗಳ ಪಾಲಿಗೆ ಜೀವ ರಕ್ಷಕ ಎಂದರು. ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಬಿ.ರಾಜು ಸೈನಿಕರ ಕುರಿತು ಹಾಡು ಹಾಡಿದರು. ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಅಧ್ಯಕ್ಷತೆ ಎಂ.ಜಿ.ಯತೀಶ್ ವಹಿಸಿದ್ದರು, ಉಪಾಧ್ಯಕ್ಷ ಪುಲಿಯಂಡ ಚೆಂಗಪ್ಪ, ಕಾರ್ಯದರ್ಶಿ ಗಳಾದ ಎಂ.ಎನ್.ರವೀಂದ್ರ, ಬಿ.ಎನ್.ರಾಜಶೇಖರ, ಸಂಚಾಲಕ ನೂರೇರಾ ಭೀಮಯ್ಯ, ಜಿ.ಕೆ.ದಿನೇಶಕುಮಾರ್, ಪುಟ್ಟೇಗೌಡ, ಹರೀಶ್ ಕುಮಾರ್ ಗೌಡ ಇದ್ದರು. ಶ್ರದ್ದಾಂಜಲಿ ಸಭೆಯ ಬಳಿಕ ಕುಶಾಲನಗರದ ಕಾರು ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಕುಶಾಲನಗರದ ಹಿರಿಯ ನಾಗರಿಕ ಜಿ.ಎಲ್.ನಾಗರಾಜು ಹಾಗೂ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು








