
ಸೋಮವಾರಪೇಟೆ ಮಾ.5 NEWS DESK : ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮದ ಶಾಸ್ತ ಯುವಕ ಸಂಘದ ವತಿಯಿಂದ ರುದ್ರಭೂಮಿಯಲ್ಲಿ ಶ್ರಮದಾನ ನಡೆಯಿತು. ಗ್ರಾಮದ ಶಾಸ್ತ ಯುವಕ ಸಂಘದ ಸದಸ್ಯರು ತಲಾ 1 ಸಾವಿರ ರೂಪಾಯಿ ರೂ. ನೆರವು ಒದಗಿಸಿ, ಜೆಸಿಬಿ ಯಂತ್ರದ ಮೂಲಕ ಕಾಡು, ಗಿಡಗಂಟಿಗಳನ್ನು ತೆರವುಗೊಳಿಸಿದರು. ಕೂಲಿ ಕಾರ್ಮಿಕ ಕುಟುಂಬಗಳು ನೆಲೆಸಿರುವ ಕಲ್ಕಂದೂರು ಬಾಣೆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಇದೇ ಸ್ಮಶಾನ ಜಾಗದಲ್ಲಿ ಶವಸಂಸ್ಕಾರ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸೌದೆಗಳಿಗೂ ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ಶವಸಂಸ್ಕಾರಕ್ಕೆ ಪರದಾಡುವ ಸ್ಥಿತಿಯಿದೆ. ಈ ಬಗ್ಗೆ ಶಾಸಕ ಡಾ.ಮಂತರ್ ಗೌಡ ಅವರ ಗಮನ ಸೆಳೆದು ಸ್ಮಶಾನದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲು ಅನುದಾನ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಶಾಸ್ತ ಯುವಕ ಸಂಘದ ಕಾರ್ಯದರ್ಶಿ ಲೋಕೇಶ್ ತಿಳಿಸಿದ್ದಾರೆ. ಶ್ರಮದಾನದಲ್ಲಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಖಜಾಂಚಿ ಸುರೇಶ್, ಪದಾಧಿಕಾರಿಗಳಾದ ಹರೀಶ್, ರಮೇಶ್, ಲಿಂಗರಾಜು, ಶಿವಕುಮಾರ್, ದೀಕ್ಷಿತ್, ಮಹೇಶ್, ಚೆನ್ನ, ಪ್ರಜ್ವಲ್, ಸ್ವಾಮಿಗೌಡ, ಅನಿಲ್ ಸೇರಿದಂತೆ ಇತರರು ಹಾಜರಿದ್ದರು.









