

ಮಡಿಕೇರಿ NEWS DESK ಏ.28 : ಕೊಡಗು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಒದಗಿಸಲಾಗುವುದು. ಆ ನಿಟ್ಟಿನಲ್ಲಿ ಜಾಗ ಗುರುತಿಸುವಂತೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಬ್ಯಾರೀಸ್ ವೆಲ್‌ಫೇರ್ ಟ್ರಸ್ಟ್ ಮಡಿಕೇರಿ ಇವರ ಸಹಯೋಗದಲ್ಲಿ ನಗರದ ಕಾವೇರಿ ಹಾಲ್‌ನಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಬ್ಯಾರಿ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಸ್ಥಳೀಯ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಸಹಕಾರದಿಂದ ಒಟ್ಟು ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷರು ಭರವಸೆ ನೀಡಿದರು. ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆಗೆ ತನ್ನದೇ ಇತಿಹಾಸ ಇದ್ದು, ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಕರೆ ನೀಡಿದರು. ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಬ್ಯಾರಿ ಭಾಷೆ ಬೆಳವಣಿಗೆ ಜೊತೆಗೆ ಚಿಂತನ ಮಂಥನಗಳು ನಡೆಯಲಿದ್ದು, ಸಮಾಜ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಅವರು ಸಲಹೆ ಮಾಡಿದರು.
ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಯುವಜನರಿಗೆ ಬ್ಯಾರಿ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುಕೂಲ ಆಗಲಿದ್ದು, ಅಭಿಪ್ರಾಯ ಹಂಚಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ, ಸಹಯೋಗ ಅತ್ಯಗತ್ಯ ಎಂದು ವಿಧಾನಸಭೆಯ ಸಭಾಧ್ಯಕ್ಷರು ಅಭಿಪ್ರಾಯಪಟ್ಟರು.
ಬ್ಯಾರಿ ಸಾಹಿತ್ಯ ಅಭಿವೃದ್ಧಿಗೆ ಹಸನಬ್ಬ, ಷಂಶುದ್ದೀನ್ ಸೇರಿದಂತೆ ಹಲವರು ಬ್ಯಾರಿ ಸಾಹಿತ್ಯಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಯುವಜನರು ಬ್ಯಾರಿ ಸಾಹಿತ್ಯ ಪುಸ್ತಕ ಸಂಸ್ಕೃತಿಗೆ ಒತ್ತು ನೀಡಬೇಕು. ಜೊತೆಗೆ ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಪುಸ್ತಕ ಅಭಿರುಚಿ ಬೆಳೆಯಬೇಕು. ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಪುಸ್ತಕ ಸಂಸ್ಕೃತಿ ಅಧ್ಯಯನ ಸಹಕಾರಿ ಎಂದು ಯು.ಟಿ.ಖಾದರ್ ಅವರು ಹೇಳಿದರು.
ಬ್ಯಾರಿಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಸಾಡಿದ ಪದಾರ್ಥಗಳನ್ನು ಸಂಗ್ರಹಿಸಿ ವ್ಯಾಪಾರ ಮಾಡುತ್ತಾರೆ ಎಂದರು.
ಸಹೋದರತ್ವ, ಸಹಭಾಗಿತ್ವ ಪ್ರತಿಯೊಬ್ಬರಲ್ಲೂ ಅತ್ಯಗತ್ಯ. ಆ ನಿಟ್ಟಿನಲ್ಲಿ ಭಿನ್ನಾಭಿಪ್ರಾಯವನ್ನು ಕ್ರೋಢೀಕರಿಸಿ ಒಟ್ಟುಗೂಡುವುದು ಅತ್ಯಗತ್ಯ ಎಂದು ಯು.ಟಿ.ಖಾದರ್ ಅವರು ಪ್ರತಿಪಾದಿಸಿದರು. ಸಮಾಜವನ್ನು ಕಟ್ಟಬೇಕು. ಸಮಸ್ಯೆಗಳು ಬಂದಾಗ ಸಕಾರಾತ್ಮಕವಾಗಿ ಬಗೆ ಹರಿಸಿಕೊಳ್ಳಬೇಕು. ತಾಳ್ಮೆ, ಸಹನೆ, ಅತ್ಯಗತ್ಯ. ಆ ನಿಟ್ಟಿನಲ್ಲಿ ಬಲಿಷ್ಠ ಭಾರತ ನಿರ್ಮಾಣದತ್ತ ಮುಂದಾಲೋಚನೆ ಇರಬೇಕು ಎಂದರು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಸಮಾಜದಲ್ಲಿ ಎಲ್ಲರ ಸಹಕಾರ ಅಗತ್ಯ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಎಂದು ಯು.ಟಿ.ಖಾದರ್ ಅವರು ತಿಳಿಸಿದರು.
ಎಲ್ಲರಿಗೂ ಗೌರವ ತರುವ ಕೆಲಸ ಮಾಡಬೇಕು. ಎಲ್ಲಾ ಭಾಷೆಯನ್ನು ಪ್ರೀತಿಸಬೇಕು. ಕಲಿಯಲು ಪ್ರಯತ್ನಿಸಬೇಕು. ವಿಶ್ವ ಒಂದು ಹಳ್ಳಿಯಾಗಿದ್ದು, ಸಾಮರಸ್ಯ ಬದುಕಿಗೆ ಎಲ್ಲಾ ಭಾಷೆ ಕಲಿಯಬೇಕು ಎಂದರು. ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸಬೇಕು. ಬಡತನದಲ್ಲಿ ಹುಟ್ಟಿರಬಹುದು ಆದರೆ ಅದನ್ನು ಮೆಟ್ಟಿ ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ವಿಧಾನ ಸಭೆಯ ಸಭಾಧ್ಯಕ್ಷರು ವಿವರಿಸಿದರು. ಯಾರೇ ಆದರೂ ಸಹ ಕಟ್ಟಡ ನಿರ್ಮಿಸುವುದರ ಜೊತೆಗೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಕೆಲಸ ಮಾಡಬೇಕು. ಆಡುವ ಮಾತು, ಮಾಡುವ ಕೆಲಸ ಸಮಾಜಕ್ಕೆ ಪೂರಕವಾಗಿರಬೇಕು ಎಂದರು. ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿದಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬ್ಯಾರಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಕೊಡಗು ಜಿಲ್ಲೆಯವರಿಗೂ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೋರಿದರು. ಸಮ್ಮೇಳನ ಅಧ್ಯಕ್ಷರಾದ ಬಿ.ಎ.ಷಂಶುದ್ದೀನ್ ಅವರು ಮಾತನಾಡಿ, ಬ್ಯಾರಿ ಸಮುದಾಯದ ಬೆಳವಣಿಗೆಯನ್ನು ಗಮನಿಸಿದಾಗ ದೇಶದ ಒಂದು ಮೂಲೆಯಲ್ಲಿದ್ದ ಈ ಸಣ್ಣ ಸಮುದಾಯ ಮುಂದಿನ ದಿನಗಳಲ್ಲಿ ರಾಜ್ಯ ಮಾತ್ರವಲ್ಲ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲೂ ಮಿಂಚುವ ಸುಳಿವನ್ನು ನೀಡುತ್ತಿದೆ ಎಂದರು. ನಲುವತ್ತು ವರ್ಷಗಳ ಹಿಂದೆ ಬ್ಯಾರಿ ಸಮುದಾಯದಲ್ಲಿ ಪದವೀಧರರ ಸಂಖ್ಯೆ ಬಹಳ ಕಡಿಮೆ ಇತ್ತು. ಎಸ್ಸೆಸ್ಸೆಲ್ಸಿ ವರೆಗೆ ಓದಿದವರ ಪ್ರಮಾಣ ಕೂಡ ಶೇ.50 ಮುಟ್ಟಿರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವವರೇ ಇರಲಿಲ್ಲ. ಬ್ಯಾರಿ ಆಂದೋಲನ ಪ್ರಾರಂಭವಾದ ಬಳಿಕ, ಅದರಲ್ಲೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡ ಬಳಿಕ ಬ್ಯಾರಿಗಳಲ್ಲಿ ಒಂದು ರೀತಿಯ ಕ್ರಾಂತಿಯೇ ಉಂಟಾಯಿತು ಎಂಬುದು ಗಮನಾರ್ಹ. ಶಿಕ್ಷಣಕ್ಕೆ ಒತ್ತು ಕೊಡುವ ಮೂಲಕ ಬ್ಯಾರಿಗಳಲ್ಲಿ ಇದ್ದ ಕೀಳರಿಮೆ ಮಾಯವಾಗುತ್ತಾ ಬಂತು ಹಾಗೂ ಸಾಮಾನ್ಯವಾಗಿ ವ್ಯಾಪಾರ ಮತ್ತು ಶ್ರಮದ ಕೆಲಸಗಳನ್ನೇ ಮಾಡುತ್ತಾ ಬಂದಿದ್ದ ಬ್ಯಾರಿಗಳು ಬೇರೆ ಕ್ಷೇತ್ರಗಳತ್ತ ಮುಖ ಮಾಡುವಂತಾಯಿತು. ಡಾಕ್ಟರ್, ಎಂಜಿನಿಯರ್, ಶಿಕ್ಷಕರು, ವಕೀಲರು ಹೀಗೆ ಬೇರೆ ಬೇರೆ ಸೇವೆಗಳಲ್ಲಿ ಮಾತ್ರವಲ್ಲ, ಸರಕಾರಿ ಸೇವೆಗಳಲ್ಲೂ ಬ್ಯಾರಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು ಎಂದರು. ದೈನಂದಿನ ತುತ್ತಿಗಾಗಿ ಶ್ರಮಪಡುತ್ತಿದ್ದ ಜನರು ತಮಗೆ ಬೇಕಾದ ಅನುಕೂಲಗಳನ್ನು ಮಾಡಿಕೊಳ್ಳಲು ಸಮರ್ಥರಾಗುತ್ತ ಬಂದರು. ಸ್ವಂತ ಮನೆಯ ಕನಸು, ಮಕ್ಕಳಿಗೊಂದು ಒಳ್ಳೆಯ ಬದುಕು ಕಟ್ಟಿಕೊಡುವ ಆಸೆ ಇವೆಲ್ಲವುಗಳನ್ನೂ ಶಿಕ್ಷಣ ನಿಜವಾಗಿಸಿತು. ಓದಿನಲ್ಲಿ ತೀರಾ ಹಿಂದುಳಿದಿದ್ದ ಈ ಸಮುದಾಯದ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಬೆರಗುಗೊಳಿಸುವಂಥದ್ದು. ಅದರಲ್ಲೂ ಹೆಣ್ಣು ಮಕ್ಕಳು ಈ ನಿಟ್ಟಿನಲ್ಲಿ ಗಂಡು ಮಕ್ಕಳಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿದ್ದು, ಅವರನ್ನು ಮೀರಿಸುವ ಸಾಧನೆ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಮಾತ್ರವಲ್ಲ, ಸ್ನಾತಕೋತ್ತರ ಹಾಗೂ ವೃತ್ತಿ ಶಿಕ್ಷಣದಲ್ಲೂ ಯಶಸ್ಸನ್ನು ಕಾಣುತ್ತಿದ್ದಾರೆ. ರ‍್ಯಾಂಕುಗಳನ್ನೂ ಗಳಿಸುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಬ್ಯಾರಿ ಸಮುದಾಯದ ಬಹಳಷ್ಟು ಸಂಘ, ಸಂಸ್ಥೆಗಳು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದ್ದರೂ ಕೆಲವು ಪ್ರತಿಭಾವಂತ ಗಂಡುಮಕ್ಕಳು ಕೂಡ ಓದಿನ ಕಡೆಗೆ ಗಮನ ಕೊಡದೇ ಇರುವುದು ಆಂತಕಕಾರಿ ಬೆಳವಣಿಗೆ ಎಂದರು. ಹಿರಿಯ ಸಾಹಿತಿ ಹಾಗೂ ಚಿಂತಕರಾದ ಎಸ್.ಜಿ.ಸಿದ್ಧರಾಮಯ್ಯ ಅವರು ಮಾತನಾಡಿ, ಬ್ಯಾರಿ ಭಾಷೆಯ ಗುಣ ವಿಶೇಷತೆಯ ಸಂವರ್ಧನೆಯ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡAತೆ ಇತ್ತು. ನಮ್ಮ ನಾಡಗೀತೆ ಈ ನೆಲದ ಗೌರವವನ್ನು ಗೌರವಿಸುವ ರೀತಿಯಲ್ಲಿ ಬ್ಯಾರಿ ಭಾಷೆಯ ಗುಣ ವಿಶೇಷತೆಯ ಸಂವರ್ಧನೆಯ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡoತೆ ಇತ್ತು ಎಂದರು. ನಮ್ಮ ನಾಡಗೀತೆ ಈ ನೆಲದ ಗೌರವವನ್ನು ಗೌರವಿಸುವ ರೀತಿಯಲ್ಲಿದೆ. ನಮ್ಮ ಸಂಸ್ಕೃತಿ ಪ್ರತೀಕವಾದ ರೀತಿಯಲ್ಲಿ ಪ್ರಾರಂಭವಾಯಿತು. ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ. ಭಾರತ ರಾಷ್ಟçವಾದರೆ, ಕರ್ನಾಟಕ ಆ ರಾಷ್ಟçದೊಳಗಿನ ಪ್ರದೇಶ. ಇಂತಹ ಹಲವು ಪ್ರದೇಶಗಳನ್ನು ಒಳಗೊಂಡ ರೀತಿಯ ಒಳಗೆ ಒಕ್ಕೂಟ ವ್ಯವಸ್ಥೆ ಗಣತಂತ್ರ ವ್ಯವಸ್ಥೆ ರೂಪಿತವಾಗಿದೆ ಎಂದರು.
ಕರ್ನಾಟಕದಲ್ಲಿ ಸಂವಿಧಾನ ಬದ್ದ ರೀತಿಯಲ್ಲಿ ಸರ್ಕಾರಗಳು ಹೇಗೆ ನಡೆದುಕೊಳ್ಳುತ್ತಿದೆ. ಇದುವರೆಗೂ ಹೇಗೆ ನಡೆದುಕೊಂಡು ಬಂದಿದೆ ಎನ್ನುವುದಕ್ಕೆ ಈ ನೆಲದೊಳಗೆ ಇರುವ ಎಲ್ಲಾ ಸಂಸ್ಕೃತಿಗಳನ್ನು ಎಲ್ಲಾ ಭಾಷೆಗಳನ್ನು ಗೌರವಿಸುವ ರೀತಿ ಒಳಗೆ ನಮ್ಮಲ್ಲಿ ಅಕಾಡೆಮಿಗಳಿವೆ. ಕೇವಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಇಲ್ಲ. ಬ್ಯಾರಿ, ಕೊಂಕಣಿ, ತುಳು, ಕೊಡವ, ಅರೆಭಾಷೆ ಸೇರಿದಂತೆ ಒಟ್ಟು 14 ಅಕಾಡೆಮಿಗಳಿದ್ದು, 4 ಪ್ರಾಧಿಕಾರಿಗಳಿವೆ. ಇದು ನಮ್ಮ ಬಹುತ್ವ ಭಾರವನ್ನು ಗೌರವಿಸಿದ ರೀತಿಯೊಳಗೆ ರೂಪುಗೊಂಡಿದೆ ಎಂದರು. ಈ ಸಂಸ್ಕೃತಿ, ಜನಾಂಗ ಎನ್ನುವುದನ್ನು ಒಂದು ಚಾರಿತ್ರಿಕ ಹಿನ್ನೋಟವನ್ನು ಇಟ್ಟುಕೊಂಡAತೆ ವರ್ತಮಾನದ ಮುಖ ಮುಖಿತ್ವದ ಒಳಗೆ ಸಂಚರಿಸಿದ ರೀತಿ ಅರಿತುಕೊಳ್ಳಬೇಕು. ಈ ಸಮುದಾಯದ ಮನೆ ಭಾಷೆ ಬ್ಯಾರಿ. ಆದರೆ ಮಾತೃಭಾಷೆ ಕನ್ನಡ. ಪರಿಸರ ಹಾಗೂ ರಾಜ್ಯ ಭಾಷೆ ಅದು. ಮಾತೃ ಭಾಷೆ ಎಂದು ಕರೆಯಬಹುದಾದ ಈ ಪರಿಸರ ಭಾಷೆಯನ್ನು ಎಲ್ಲ ಜನರ ಜೊತೆಯೊಳಗೆ ಸಂವಾಹನಕ್ಕೆ ಬಳಕೆಯಾಗುವ ಭಾಷೆಯನ್ನು ರಾಜ್ಯ ಭಾಷೆ ಎಂದು ಹೇಳಲಾಗುತ್ತದೆ. 22 ಭಾಷೆಯ ಅಂಗೀಕೃತ ಭಾಷೆ ಕನ್ನಡ. ಈ ಭಾಷೆಯ ನೆಲ, ಧರ್ಮ, ಪ್ರಜಾಪ್ರಭುತ್ವವನ್ನು ಗೌರವಿಸುವ ರೀತಿಯೊಳಗೆ ಈ ಜನಾಂಗ, ಸಂಸ್ಕೃತಿ, ಭಾಷೆ ಒಂದು ರೀತಿಯ ಬದುಕು ಕಟ್ಟಿಕೊಂಡಿದೆ ಎನ್ನುವುದು ಬಹಳ ಮಾದರಿಯಾಗಿದೆ ಎಂದು ಎಸ್.ಜಿ.ಸಿದ್ಧರಾಮಯ್ಯ ಅವರು ವಿವರಿಸಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ, ಎಲ್ಲಾ ಧರ್ಮ ಒಂದು. ಹಿಂದೂ, ಮುಸ್ಲಿಂ, ಕ್ರೈಸ್ತ ಜಾನಪದೀಯ ಹಿನ್ನೆಲೆ ಇದ್ದರೆ ಸಮಾಜ ಉತ್ತಮವಾಗಿ ಬೆಳೆಯುತ್ತದೆ. ಯಾವ ನೆಲದಲ್ಲಿ ಸಂಸ್ಕೃತಿ ಮತ್ತು ಕಲೆ ದೀರ್ಘಕಾಲದ ಇದ್ದರೆ ಆ ಸಮಾಜ ಉದ್ಧಾರ ಆಗುತ್ತದೆ. ಸಂಸ್ಕೃತಿ ಇಲ್ಲದೆ ಚರಿತ್ರೆಯೇ ಇಲ್ಲ. ಮುಂದಿನ ಪೀಳಿಗೆ ಒಗ್ಗಟ್ಟಿನಿಂದ ಸಮಾಜ ಕಟ್ಟುವಂತಾಗಬೇಕು ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ, ಕನ್ನಡ ಭಾಷೆ ಹಾಗೂ ಉಪ ಭಾಷೆಗಳು ನಶಿಸಿ ಹೋಗುತ್ತಿವೆ ಎಂಬ ಮಾತಿದೆ. ಆದರೆ ಭಾಷೆಗಳು ಎಂದು ನಶಿಸಲು ಸಾಧ್ಯವಿಲ್ಲ. ಯಾವಾಗ ನಾವು ನಮ್ಮ ಭಾಷೆಯನ್ನು ಮಾತನಾಡುತ್ತೇವೊ ಆಗ ಭಾಷೆ, ಸಂಸ್ಕೃತಿ ಉಳಿಯುತ್ತದೆ. ಕೆಲವು ಪ್ರದೇಶಗಳಲ್ಲಿ ಹೊರತು ಪಡಿಸಿದರೆ ಉಳಿದೆಡೆ ಭಾಷೆ ಬೆಳವಣಿಗೆ ಕಾಣುತ್ತಿಲ್ಲ. ಆದ್ದರಿಂದ ಭಾಷೆಯನ್ನು ಉಳಿಸುವ ಮೂಲಕ ನಮ್ಮ ಸಂಸ್ಕೃತಿ, ದೇಶವನ್ನು ಉಳಿಸಬೇಕು ಎಂದು ಹೇಳಿದರು. ನಾವು ನಮ್ಮ ಭಾಷೆಯನ್ನು ದಿನನಿತ್ಯ ಮಾತನಾಡದಿದ್ದರೆ ಅದು ನಶಿಸಿ ಹೋಗುತ್ತದೆ. ಭಾಷೆ ಉಳಿದರೆ, ಸಂಸ್ಕೃತಿ ಉಳಿಯುತ್ತದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ಹಸನಬ್ಬ, ಅಮೀನ್ ಮೊಹಿಸಿನ್, ಮನ್ಸೂರ್, ಮಹಮ್ಮದ್, ಮಡಿಕೇರಿ ನಗರಸಭೆ ಸದಸ್ಯರಾದ ಎಂ.ಎ.ಮುಸ್ತಫಾ, ಬಶೀರ್ ಅಹ್ಮದ್, ನಾಮ ನಿರ್ದೇಶಿತ ಸದಸ್ಯರಾದ ಮಹಮ್ಮದ್ ಯಾಕೂಬ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಹೆಚ್.ಉಮರ್ ಸೇರಿದಂತೆ ಇತರರು ಇದ್ದರು. ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಮ್ಮೇಳನಾಧ್ಯಕ್ಷರಾದ ಬಿ.ಎ.ಷಂಶುದ್ದೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ನಗರದ ಕ್ರೆಸೆಂಟ್ ಶಾಲೆಯಿಂದ ಕಾವೇರಿ ಹಾಲ್ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಡಿಕೇರಿ ನಗರಸಭೆ ಸದಸ್ಯರಾದ ಅಮೀನ್ ಮೊಹ್ಸಿನ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ನಂತರ ಬ್ಯಾರಿ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚೆ ನಡೆಯಿತು. ಸಂಜೆಯ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಮ್ಮೇಳನದಲ್ಲಿ ದಫ್, ಒಪ್ಪನೆ ಪಾಟ್, ಕೋಲ್ಕಲಿ ಮತ್ತು ಮಂಗಳೂರಿನ ಕಲಾತಂಡದಿoದ ಬ್ಯಾರಿ ಹಾಡುಗಳು ಗಮನ ಸೆಳೆಯಿತು. ಮುನೀರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಜೀರ್ ಅಹಮದ್ ಸ್ವಾಗತಿಸಿದರು.









