
ಮಡಿಕೇರಿ ಜೂ.8 NEWS DESK : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಜೂ.13 ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು- ವರರ ಸಮಾವೇಶ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, 9.30ಕ್ಕೆ ವಧು- ವರರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು. ನೋಂದಣಿ ಶುಲ್ಕ ರೂ.500 ಪಾವತಿಸಬೇಕು, ವಧು- ವರರು ಕಡ್ಡಾಯವಾಗಿ ಭಾಗವಹಿಸಬೇಕು, ವಧುವಿಗೆ 18 ಹಾಗೂ ವರನಿಗೆ 21 ವರ್ಷವಾಗಿರಬೇಕು, ಪೋಸ್ಟ್ ಕಾರ್ಡ್ ಅಳತೆಯ ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ ಮತ್ತಿತರ ಮಾಹಿತಿ ನೀಡಬೇಕು. ಈ ಸಮಾವೇಶದಲ್ಲಿ ವಿಶೇಷ ಚೇತನರು, ವಿದುರ, ವಿಧವೆಯರು, ಮರು ವಿವಾಹ ಬಯಸುವವರು, ವಿಚ್ಛೇದಿತರು ಭಾಗವಹಿಸಬಹುದು. ವಿದೇಶಗಳಲ್ಲಿ ಅಥವಾ ಹೊರ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗದ ಬಂಧುಗಳು ಪಾಲ್ಗೊಳ್ಳಬಹುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9448884673, 9844440266 ನ್ನು ಸಂಪರ್ಕಿಸಬಹುದಾಗಿದೆ. *ಕೃಷಿಕರನ್ನು ವಿವಾಹವಾಗಿ* ಗೌಡ ಸಮುದಾಯದಲ್ಲಿ ಕೃಷಿಕ ವರನನ್ನು ವಿವಾಹವಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಕಾಯಕದಲ್ಲಿ ತೊಡಗಿರುವ ಯುವಕರು ವಿವಾಹದಿಂದ ವಂಚಿತರಾಗುತ್ತಿದ್ದಾರೆ. ಯುವತಿಯರು ನಗರದೆಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಚೊಕ್ಕಾಡಿ ಎನ್.ಅಪ್ಪಯ್ಯ ಕೃಷಿಕ ಯುವಕರನ್ನು ವಿವಾಹವಾಗುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶೆಟ್ಟಿಜನ ಗಣಪತಿ, ಖಜಾಂಚಿ ಕುಯ್ಯಮುಡಿ ಅಶ್ವಿನಿ ಕುಮಾರ್, ಕಾರ್ಯದರ್ಶಿ ಕುಂಜಿಲನ ರತ್ನ ಕುಮಾರಿ, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ ಹಾಗೂ ನಿರ್ದೇಶಕ ಸೂರ್ತಲೆ ರಾಮಚಂದ್ರ ಉಪಸ್ಥಿತರಿದ್ದರು.









