
ಮಡಿಕೇರಿ ಜೂ.16 NEWS DESK : ಕೊಡಗು ಜಿಲ್ಲೆಯಲ್ಲಿ ಹೋಂ-ಸ್ಟೇ ನಡೆಸುವ ಮಾಲೀಕರು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನಿಯಮಾನುಸಾರ ಹೋಂ-ಸ್ಟೇ ನೋಂದಣಿ ಮಾಡಿಕೊಳ್ಳಲು ಸರ್ಕಾರದ ಪ್ರವಾಸೋದ್ಯಮ ನೀತಿ ಹಾಗೂ ಮಾರ್ಗಸೂಚಿಗಳಿಗೆ ಬದ್ಧರಿದ್ದಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡಿರುವ ಮಾಲೀಕರಿಗೆ ಪ್ರವಾಸೋದ್ಯಮ ಇಲಾಖೆಯಿಂದ 5 ವರ್ಷದ ಅವಧಿಗೆ ಪರವಾನಿಗೆಯನ್ನು ನೀಡಲಾಗಿದೆ. ಹೋಂ-ಸ್ಟೇ ನಡೆಸುವ ಮಾಲೀಕರು ಪ್ರವಾಸಿಗರ ಮನೋರಂಜನೆಗಾಗಿ ಹೋಂ-ಸ್ಟೇಗಳಲ್ಲಿ ಈಜುಕೊಳ, ಜಿಪ್‍ಲೈನ್, ಕಾಯಾಕಿಂಗ್ ಮತ್ತು ಇತರೆ ಸಾಹಸ ಚಟುವಟಿಕೆ ಅಳವಡಿಸಿಕೊಂಡಿರುತ್ತಾರೆ. ಈ ಚಟುವಟಿಕೆಗಳನ್ನು ನಡೆಸುವ ಸಂಬಂಧ ಸರಿಯಾದ ಮಾರ್ಗಸೂಚಿ ಅನುಸರಿಸುವುದು ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು. ಇವುಗಳಿಂದ ಪ್ರವಾಸಿಗರಿಗೆ ತೊಂದರೆಗಳು ಉಂಟಾದಲ್ಲಿ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ. ಹೋಂ-ಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಸುವಂತಿಲ್ಲ ಎಂದು ಈಗಾಗಲೇ ತಿಳಿಸಿದರೂ ಸಹ, ಹಲವು ಹೋಂ-ಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಕೆಯಲ್ಲಿರುವುದು ಕಂಡು ಬಂದಿರುತ್ತದೆ. ಗ್ಯಾಸ್ ಗೀಸರ್ ಬಳಕೆಯಿಂದ ಅನಾಹುತಗಳು ಸಂಭವಿಸಿದಲ್ಲಿ ಹೋಂ-ಸ್ಟೇ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ. ಇಲಾಖೆಯು ನೀಡುವ ಮಾರ್ಗಸೂಚಿ ಪಾಲಿಸುವುದರೊಂದಿಗೆ ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿರುವಂತೆ ಸಹಕರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ ಅವರು ತಿಳಿಸಿದ್ದಾರೆ.









