
ಮಡಿಕೇರಿ ಜೂ.17 NEWS DESK : ಇದೇ ಜೂನ್, 21 ರಂದು ನಡೆಯುವ ನೀಟ್ ಯುಜಿ-2026 ಮರುಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನೀಟ್ ಮರುಪರೀಕ್ಷೆ ನೋಡಲ್ ಅಧಿಕಾರಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಭಾಗ್ಯನಂದನ್, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರಿಂದ ಮಾಹಿತಿ ಪಡೆದರು. ನೀಟ್(ಯುಜಿ) ಮರು ಪರೀಕ್ಷೆಯನ್ನು ಯಾವುದೇ ಗೊಂದಲಕ್ಕೆ ಅವಕಾಶ ಮಾಡದೆ ಸುಗಮ ಹಾಗೂ ಸುಲಲಿತವಾಗಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸುವುದು, ಪರೀಕ್ಷೆ ಬರೆಯುವ ಕೇಂದ್ರದಲ್ಲಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನೋಡಿಕೊಂಡು ಪರೀಕ್ಷೆ ಕೊಠಡಿಗೆ ತೆರಳುವಂತಾಗಲು ನೋಂದಣಿ ಸಂಖ್ಯೆ ಬೋರ್ಡ್‍ಗಳನ್ನು ಅಳವಡಿಸುವುದು, ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡುವುದು, ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಪ್ರಶ್ನೆ ಪತ್ರಿಕೆ ತರಿಸಿಕೊಳ್ಳುವುದು, ಉತ್ತರ ಪತ್ರಿಕೆ ರವಾನಿಸುವುದು ಸೇರಿದಂತೆ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರ ಸುತ್ತ ಅಗತ್ಯ ನಿಯಮ ಪಾಲಿಸುವುದು, ವಿದ್ಯುತ್ ಪೂರೈಕೆ, ಅಗತ್ಯ ವಾಹನ ಒದಗಿಸುವುದು, ಪೊಲೀಸರ ನಿಯೋಜನೆ ಮತ್ತಿತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಬೇಕು ಎಂದರು. ನೀಟ್ ಮರುಪರೀಕ್ಷೆ ಸಂಬಂಧ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಬಾರದು. ಯಾವುದೇ ರೀತಿಯ ಸಮಸ್ಯೆ ಹಾಗೂ ಗೊಂದಲಕ್ಕೆ ಅವಕಾಶ ಮಾಡದೆ ಮರು ಪರೀಕ್ಷೆಯನ್ನು ಸುಲಲಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಾಕೀತು ಮಾಡಿದರು. ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ ಹಾಗೂ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಮಾಹಿತಿ ನೀಡಿ ನೀಟ್(ಯುಜಿ) ಮರುಪರೀಕ್ಷೆಯು ಜಿಲ್ಲಾ ಕೇಂದ್ರ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, 516 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರದಲ್ಲಿ 22 ಕೊಠಡಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವಿಜಯ್ ಅವರು ವಿವರಿಸಿದರು. ನೀಟ್(ಯುಜಿ) ಮರು ಪರೀಕ್ಷೆ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ನೀಟ್ ಮರುಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ನೀಟ್ ನೋಡಲ್ ಅಧಿಕಾರಿ ಹಾಗೂ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಭಾಗ್ಯನಂದನ್ ಅವರು ಮಾತನಾಡಿ ನೀಟ್ ಮರುಪರೀಕ್ಷೆ ಸಂಬಂಧ ಪರೀಕ್ಷಾ ಪ್ರಾಧಿಕಾರದ ನಿಯಮದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.









