

ಮಡಿಕೇರಿ NEWS DESK ಜೂ.19 : ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ದೇವನೆಲೆಯಾದ ಮಲ್ಮ ಬೆಟ್ಟದಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಕಾಮಗಾರಿಯ ವಿರುದ್ಧ ಸ್ಥಳೀಯರು ನಡೆಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ನಾಪೋಕ್ಲು ಕೊಡವ ಸಮಾಜ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮಲ್ಮ ಬೆಟ್ಟ ವ್ಯಾಪ್ತಿಯಲ್ಲಿ ಜಾಗವನ್ನು ಖರೀದಿಸಿರುವ ಖಾಸಗಿ ವ್ಯಕ್ತಿಗಳು ಪರಿಸರಕ್ಕೆ ವಿರುದ್ಧವಾದ ಮತ್ತು ಶ್ರೀ ಇಗ್ಗುತ್ತಪ್ಪ ದೇವರ ದೇವನೆಲೆಯ ಪಾವಿತ್ರ್ಯತೆಗೆ ದಕ್ಕೆ ಬರುವಂತೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವುದನ್ನು ಜೂ.19 ರಂದು ನಡೆಸಿದ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಸಮಾಜವು ಊರಿನವರ ಹಾಗೂ ನಾಡಿನವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಅಲ್ಲದೆ ಹೋರಾಟಕ್ಕೂ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.








