
ಮಡಿಕೇರಿ NEWS DESK ಜು.31 : ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಆ.1 ರಂದು ರಜೆ ಘೋಷಿಸಲಾಗಿದೆ.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯಿಂದ ಉತ್ತಮವಾಗಿ ಮಳೆೆಯಾಗುತ್ತಿದ್ದು, “ತ್ರಿವೇಣಿ” ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದೊಂದು ದಿನದ ಅವಧಿಯಲ್ಲಿ ಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 73 ಮಿ.ಮೀ. ಮಳೆ ದಾಖಲಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಾವೇರಿ ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ನಡುವಿನ ಬೇತ್ರಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರುದ್ರರಮಣೀಯ ದೃಶ್ಯ ಗೋಚರಿಸುತ್ತಿದೆ. ನಾಪೋಕ್ಲು ವಿಭಾಗದಲ್ಲು ಉತ್ತಮ ಮಳೆಯಾಗುತ್ತಿದ್ದು, ನಾಪೋಕ್ಲು ಮತ್ತು ಹಳೇ ತಾಲ್ಲೂಕು ನಡುವಿನ ರಸ್ತೆಯ ಮೇಲೆ ಕಾವೇರಿ ನದಿ ನೀರು ಹರಿಯುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಗುರುವಾರದಿಂದ ನಿರಂತರ ಗಾಳಿ ಮಳೆಯಾಗುತ್ತಿದ್ದು, ಮೈಕೊರೆಯುವ ಚಳಿಯ ವಾತಾವರಣವಿದೆ. ವಿರಾಜಪೇಟೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗುತ್ತಿದೆ. ಬಲಮುರಿ, ಕೊಟ್ಟಮುಡಿ, ನೆಲ್ಯಹುದಿಕೇರಿ, ಕರಡಿಗೋಡು, ಗುಡ್ಡೆಹೊಸೂರು ಬಳಿ ಕಾವೇರಿ ನದಿ ಮೈದುಂಬಿಕೊAಡು ಹರಿಯುತ್ತಿದೆ. ಮಡಿಕೇರಿ ನಗರ, ಮಕ್ಕಂದೂರು, ಕಾಲೂರು, ಮುಕ್ಕೋಡ್ಲು, ಸೂರ್ಲಬ್ಬಿ, ಮಾದಾಪುರ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಕಾರಣ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಮಡಿಕೇರಿ ಮತ್ತು ಸೋಮವಾರಪೇಟೆ ತಹಶೀಲ್ದಾರರು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಆ.1 ರಂದು ಒಂದು ದಿನ ರಜೆ ಘೋಷಿಸಿದ್ದಾರೆ. *ಮಳೆ ವಿವರ* ಕಳೆದ 24 ಗಂಟೆ ಅವಧಿಯಲ್ಲಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಭಾಗದಲ್ಲಿ ದಾಖಲೆಯ 188 ಮಿ.ಮೀ ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ 73, ಶ್ರೀಮಂಗಲ 58, ಪೊನ್ನಂಪೇಟೆ 55, ಅಮ್ಮತ್ತಿ 54.5, ನಾಪೋಕ್ಲು 43.4, ಹುದಿಕೇರಿ 37 ಮಿ.ಮೀ ಮಳೆಯಾಗಿದೆ. ಜಿಲ್ಲೆಗೆ ಕಳೆದ 24 ಗಂಟೆ ಅವಧಿಯಲ್ಲಿ 42.29 ಮಿ.ಮೀ ಮಳೆಯಾಗಿದೆ.
*ಹಾರಂಗಿ ಹೆಚ್ಚಳ* ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಅಣೆಕಟ್ಟೆಯಿಂದ 3500 ರಿಂದ 4 ಸಾವಿರ ಕ್ಯುಸೆಕ್‌ವರೆಗೆ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ.









