
ಮಡಿಕೇರಿ NEWS DESK ಆ.10 : ಆಲೆಮಾಡ ಕುಟುಂಬದ ವತಿಯಿಂದ ಅ.10 ಮತ್ತು 11 ರಂದು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ದ್ವಿತೀಯ ವರ್ಷದ ಅಂತರ ಕೊಡವ ಕುಟುಂಬಗಳ “ಆಲೆಮಾಡ ತೋಕ್ ನಮ್ಮೆ-2026′ ನಡೆಯಲಿದೆ ಎಂದು ಆಯೋಜನಾ ಸಮಿತಿಯ ನಿರ್ದೇಶಕ ಆಲೆಮಾಡ ಕೀರ್ತನ್ ತಮ್ಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ಅವರು, 12 ಬೋರ್ ಶಾಟ್ ಗನ್ ಮತ್ತು .22 ರೈಫಲ್ ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ ಇಬ್ಬರು ಸದಸ್ಯರನ್ನು ಒಳಗೊಂಡ ತಂಡಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರು ತಂಡದಲ್ಲಿ ಪಾಲ್ಗೊಳ್ಳಬಹುದು. ಯಾವುದೇ ಒಂದು ಕೊಡವ ಕುಟುಂಬದಿ0ದ ನಾಲ್ಕು ತಂಡಗಳು ಸ್ಪರ್ಧಿಸಬಹುದಾಗಿದೆ ಎಂದರು.
ಪ್ರಸಕ್ತ ಸಾಲಿನ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ, ಕಳೆೆದ ಸಾಲಿನಲ್ಲಿ ಪೊನ್ನಂಪೇಟೆಯಲ್ಲೆ ಪೆಮ್ಮಂಡ ಕುಟುಂಬದಿ0ದ ಆಯೋಜಿತ ತೋಕ್ ನಮ್ಮೆಯಲ್ಲಿ 248 ತಂಡಗಳು ಪಾಲ್ಗೊಂಡಿದ್ದವು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ತಲಾ 1 ಸಾವಿರ ರೂ. ನೋಂದಣಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ನೋಂದಣಿ ಪ್ರಕ್ರಿಯೆ ಆ.16ರಿಂದ ಆರಂಭಗೊಳ್ಳಲಿದ್ದು, ಸೆ.30ರವರೆಗೆ ಇರಲಿದೆ. ಆಸಕ್ತ ತಂಡಗಳು ತಮ್ಮಯ್ಯ ಮೊ.9741203123, ಬೋಪಣ್ಣ ಮೊ.9901221945 ಇವರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆನ್ ಲೈನ್ https://www.alemada-okka.omline/ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದೆಂದು ಹೇಳಿದರು.
*3 ಲಕ್ಷ ಬಹುಮಾನ*
ಶೂಟಿಂಗ್ ಸ್ಪರ್ಧೆಯಲ್ಲಿ ಒಟ್ಟಾಗಿ 3 ಲಕ್ಷ ರೂ. ಮೊತ್ತದ ಬಹುಮಾನವನ್ನು ನೀಡಲಾಗುತ್ತದೆ. ವಿಜೇತ ತಂಡಕ್ಕೆ 60 ಸಾವಿರ ರೂ., ದ್ವಿತೀಯ 50 ಸಾವಿರ ರೂ., ತೃತೀಯ 40 ಸಾವಿರ ರೂ., ನಾಲ್ಕನೇ 30 ಸಾವಿರ ರೂ., ಮತ್ತು 5ನೇ ಬಹುಮಾನÀವಾಗಿ 20 ಸಾವಿರ ನಗದು ಬಹುಮಾನವನ್ನು ಹಾಗೂ ಎಲ್ಲ ವಿಜೇತರಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ. ಏರ್ ಗನ್ ಎಗ್ ಶೂಟ್ ಸ್ಪರ್ಧೆಯನ್ನು ಕೂಡ ಇದೇ ಸಂದರ್ಭ ಆಯೋಜಿಸಲಾಗುವುದು. ಇದಕ್ಕೆ ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ಕೀರ್ತನ್ ತಮ್ಮಯ್ಯ ತಿಳಿಸಿದರು. ಕೊಡವರ ಪಾಲಿಗೆ ತೋಕ್ (ಬಂದೂಕು) ಕೇವಲ ಒಂದು ಆಯುಧವಲ್ಲ. ಅದು ತಲೆತಲಾಂತರಗಳಿ0ದ ಹರಿದು ಬಂದಿರುವ ಸಂಪ್ರದಾಯ, ಸಂಸ್ಕೃತಿ, ಕುಟುಂಬ ಪರಂಪರೆ ಮತ್ತು ಜೀವನ ಪದ್ಧತಿಯೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿರುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾಗಿದೆ. ತೋಕ್ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆ ಮೂಲಕ ಕೊಡವ ಕುಟುಂಬಗಳ ನಡುವಿನ ಬಾಂಧವ್ಯವನ್ನು ಸಂಭ್ರಮಿಸುವ ತೋಕ್ ನಮ್ಮೆಯಲ್ಲಿ ಜಿಲ್ಲೆಯ ಎಲ್ಲಾ ಕೊಡವ ಕುಟುಂಬಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಆಲೆಮಾಡ ಕುಟುಂಬದ ಹಿರಿಯರಾದ ಆಲೆಮಾಡ ಪೂವಯ್ಯ, ಪಂದ್ಯಾವಳಿ ಆಯೋಜನಾ ಸಮಿತಿಯ ಅಧ್ಯಕ್ಷ ಆಲೆಮಾಡ ಸೋಮಣ್ಣ, ಕಾರ್ಯದರ್ಶಿ ಆಲೆಮಾಡ ಬೋಪಣ್ಣ ಹಾಗೂ ನಿರ್ದೇಶಕ ಆಲೆಮಾಡ ನವೀನ್ ಉಪಸ್ಥಿತರಿದ್ದರು.









