
ವಿರಾಜಪೇಟೆ ಆ.11 NEWS DESK : ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಶಿಸ್ತಿನ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅಧಿಕಾರ ವಹಿಸಿ ಮಾತನಾಡಿದ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಲೇಪಾಕ್ಷಿ ಐ.ಡಿ., ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣ, ಶಿಸ್ತು ಹಾಗೂ ದೇಶಪ್ರೇಮವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಅಧಿಕಾರ ಸ್ವೀಕರಿಸಿದ ವಿದ್ಯಾರ್ಥಿ ನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಶಾಲಾ ಹಂತದಲ್ಲಿ ದೊರೆಯುವ ಇಂತಹ ಜವಾಬ್ದಾರಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಅಡಿಪಾಯವಾಗುತ್ತವೆ ಎಂದು ಹೇಳಿದರು. :: ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ: ಬಿ.ಬಿ. ಮಾದಪ್ಪ ::
ಗೌರವ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಟ್ರಸ್ಟ್ ಅಧ್ಯಕ್ಷ ರೋಟೇರಿಯನ್ ಬಿ.ಬಿ. ಮಾದಪ್ಪ ಮಾತನಾಡಿ, ನಾಯಕತ್ವ ಎಂಬುದು ಕೇವಲ ಹುದ್ದೆಯಲ್ಲ, ಅದೊಂದು ಜವಾಬ್ದಾರಿ. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಶಾಲೆಯ ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು. ರೋಟರಿ ಟ್ರಸ್ಟ್ ಕಾರ್ಯದರ್ಶಿ ರೋಟೇರಿಯನ್ ಸರೋಜ್ ಕಾರ್ಯಪ್ಪ ಉಪಸ್ಥಿತರಿದ್ದು, ನೂತನ ನಾಯಕರಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ದೊರೆಯುವ ಜವಾಬ್ದಾರಿಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಶಿಸ್ತು ಹಾಗೂ ನಿಯಮಗಳನ್ನು ಪಾಲಿಸುವುದರೊಂದಿಗೆ ತಮ್ಮ ಕರ್ತವ್ಯಗಳನ್ನು ಪ್ರೀತಿಯಿಂದ ನಿರ್ವಹಿಸಬೇಕು ಎಂದು ಹೇಳಿದರು. ನೂತನ ನಾಯಕರು ಇಡೀ ಶಾಲೆಗೆ ಮಾದರಿಯಾಗಿ ನಿಂತು, ಸಹಪಾಠಿಗಳನ್ನು ಪ್ರೀತಿ ಹಾಗೂ ಗೌರವದಿಂದ ಮುನ್ನಡೆಸಬೇಕು ಎಂದು ಹಾರೈಸಿದರು. :: ನೂತನ ವಿದ್ಯಾರ್ಥಿ ನಾಯಕರು :: ಶಾಲಾ ನಾಯಕಿಯಾಗಿ ಹನ್ನಾ ವಿಲ್ಸನ್, ಉಪ ಶಾಲಾ ನಾಯಕಿಯಾಗಿ ರಕ್ಷಿತಾ, ಕ್ರೀಡಾ ನಾಯಕಿಯಾಗಿ ರಿದಾ ಫಾತಿಮಾ, ಉಪ ಕ್ರೀಡಾ ನಾಯಕರಾಗಿ ಆರ್ಯ ಚಿನ್ನಪ್ಪ, ಸಾಂಸ್ಕೃತಿಕ ನಾಯಕಿಯಾಗಿ ಗ್ರೀಶಾಲಿ, ಉಪ ಸಾಂಸ್ಕೃತಿಕ ನಾಯಕಿಯಾಗಿ ನಿಷ್ಮಾ ಕಿರಣ್, ಶಿಸ್ತು ನಾಯಕರಾಗಿ ಭವಿಷ್ ಪಿ., ಉಪ ಶಿಸ್ತು ನಾಯಕಿಯಾಗಿ ಯಶಸ್ವಿನಿ, ಆರೋಗ್ಯ ನಾಯಕಿಯಾಗಿ ರಚನಾ, ಉಪ ಆರೋಗ್ಯ ನಾಯಕಿಯಾಗಿ ತಶ್ವಿ ಆಯ್ಕೆಯಾದರು. ಹೌಸ್ ನಾಯಕರಾಗಿ ಎಮರಾಲ್ಡ್ ಹೌಸ್ನ ಕ್ಯಾಪ್ಟನ್ ಅನ್ವಿಕಾ, ವೈಸ್ ಕ್ಯಾಪ್ಟನ್ ಹಫ್ನಾಜ್; ರೂಬಿ ಹೌಸ್ನ ಕ್ಯಾಪ್ಟನ್ ಪ್ರೇಕ್ಷಾ, ವೈಸ್ ಕ್ಯಾಪ್ಟನ್ ನವ್ಯಶ್ರೀ; ಸಫೈರ್ ಹೌಸ್ನ ಕ್ಯಾಪ್ಟನ್ ಯಾನ್ ಸಿ.ಪಿ., ವೈಸ್ ಕ್ಯಾಪ್ಟನ್ ಹಿಬಾ; ಟೋಪಾಜ್ ಹೌಸ್ನ ಕ್ಯಾಪ್ಟನ್ ಮೊಹಮ್ಮದ್ ಶಾನ್, ವೈಸ್ ಕ್ಯಾಪ್ಟನ್ ವಿಬಿನ್ ಕುಶಾಲಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










