

ಮಡಿಕೇರಿ ಆ.15 NEWS DESK : ನಗರದ ರಾಘವೇಂದ್ರ ದೇವಾಲಯದ ಹತ್ತಿರವಿರುವ ನೇತಾಜಿ ಜಂಕ್ಷನ್‌ನಲ್ಲಿ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮಡಿಕೇರಿಯ ಖ್ಯಾತ ನೋಟರಿ ಹಾಗೂ ವಕೀಲರಾದ ಮುಕ್ಕಾಟಿ ಜಯಚಂದ್ರ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ನಂತರ ನೆರೆದಿದ್ದ ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆ ಹಾಡುವ ಮೂಲಕ ದೇಶಭಕ್ತಿಯನ್ನು ಮೆರೆದರು. :: ಆಂತರಿಕ ಶತ್ರುಗಳ ಕುರಿತು ಎಚ್ಚರಿಕೆ :: ಧ್ವಜಾರೋಹಣದ ಬಳಿಕ ಮಾತನಾಡಿದ ಮುಕ್ಕಾಟಿ ಜಯಚಂದ್ರ ಅವರು, “ಅಖಂಡ ಭಾರತವು 1947ರಲ್ಲಿ ವಿಭಜನೆಗೊಂಡಿತು. ಪ್ರಸ್ತುತ ಪರಿಸ್ಥಿತಿಯಲ್ಲಿ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿರುವ ಶತ್ರುಗಳೇ ಅಧಿಕಗೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಯುವಪೀಳಿಗೆಯು ದಾರಿ ತಪ್ಪದಂತೆ ಎಚ್ಚೆತ್ತುಕೊಂಡು, ಅಖಂಡ ಭಾರತದ ಸಂಕಲ್ಪದೊಂದಿಗೆ ಮುನ್ನಡೆಯಬೇಕು” ಎಂದು ಕರೆ ನೀಡಿದರು. ಅಲ್ಲದೆ, ಸ್ವಾತಂತ್ರ್ಯ ದಿನಾಚರಣೆಯ ಐತಿಹಾಸಿಕ ಮಹತ್ವವನ್ನು ಸಭಿಕರಿಗೆ ವಿವರಿಸಿದರು. :: ವಿಶೇಷ ಆಹ್ವಾನಿತರ ಉಪಸ್ಥಿತಿ :: ಕಾರ್ಯಕ್ರಮದಲ್ಲಿ ಸ್ಥಳೀಯರಾದ ಹಿರಿಯರಾದ ಮಹಮ್ಮದಾಲಿ, ನಿವೃತ್ತ ಶುಶ್ರೂಷಕಿ ಶ್ರೀಮತಿ ಬಿ. ವಸಂತಿ, ಮಾಜಿ ಸೈನಿಕರಾದ ಅಯ್ಯಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಗೀತಾ ಹಾಗೂ ಶ್ರೀಮತಿ ಕಾವೇರಿ, ಎಲೆಕ್ಟ್ರಿಷಿಯನ್ ಫಾಜಿಲ್, ಪ್ರದೀಪ್ ಪಾಯಸ್ ಹಾಗೂ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷರಾದ ಗಣೇಶ್ ಉಪಸ್ಥಿತರಿದ್ದರು. :: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರ ಮಂಥನ :: ರಾಜೇಶ್ ವರದರಾಜ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಹಿರಿಯರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರ ಮನಸೂರೆಗೊಂಡರು. ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ಮಾಜಿ ಅಧ್ಯಕ್ಷರಾದ ಅಪ್ಪು ಮಹೇಶ್ ಮಾತನಾಡಿ, “ಇಂದಿನ ಯುವ ಶಕ್ತಿ ಮತ್ತು ‘ಜೆನ್ ಝೀ’ (ಉeಟಿ Z) ಯುವಪೀಳಿಗೆಯು ಹಾದಿ ತಪ್ಪದಂತೆ ಪೋಷಕರು ಹಾಗೂ ಪಾಲಕರು ವಿಶೇಷ ಜಾಗೃತಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶದ ರಾಜಧಾನಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯು ಬೇರೆಯದೇ ರೂಪ ಪಡೆದು ದೇಶಕ್ಕೆ ಆಘಾತವುಂಟು ಮಾಡುವಂತಾಯಿತು. ಯುವಜನರು ಇಂತಹ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂತ್ಯದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸಿಹಿ ಹಾಗೂ ಲಘು ಉಪಹಾರವನ್ನು ಹಂಚಲಾಯಿತು.








