ಸುಂಟಿಕೊಪ್ಪ, NEWS DESK ಸೆ.1: ಯುವಶಕ್ತಿ ದಾರಿ ತಪ್ಪದಂತೆ ಹಿರಿಯರು ಹಾಗೂ ಸಮಾಜವು ನಿಸ್ವಾರ್ಥ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಹೇಳಿದರು.
ಜಾತಿ, ಧರ್ಮ ಹಾಗೂ ರಾಜಕೀಯ ರಹಿತವಾಗಿ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ನೂತನವಾಗಿ ರಚನೆಯಾದ ‘ವೇವ್’ ಸಂಘಟನೆಯ ಅಧಿಕೃತ ಉದ್ಘಾಟನೆಯನ್ನು ಸುಂಟಿಕೊಪ್ಪದಲ್ಲಿ ನೆರವೇರಿಸಿ ಅವರು ಮಾತನಾಡಿದರು.
ಕೊರೊನಾ ಮಹಾಮಾರಿ ಹಾಗೂ ಪ್ರಕೃತಿ ವಿಕೋಪದ ಭೂಕುಸಿತದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು 300–400 ಕುಟುಂಬಗಳಿಗೆ ನೆರವಾದ ಕರುಣಾಮಯಿ ಯುವಕರ ತಂಡ ಇದೀಗ ‘ವೇವ್’ ಎಂಬ ಅಧಿಕೃತ ರೂಪ ಪಡೆದುಕೊಂಡಿದೆ. ಕಡಲಿನ ಅಲೆಯಂತೆ ಈ ಬಳಗದ ನಿಸ್ವಾರ್ಥ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಸಂಘಟನೆಯ ಸಂಚಾಲಕರಾಗಿ ಕೆ.ಎ. ಲತೀಫ್ ಹಾಗೂ ವಕೀಲ ಫರಾಝ್ ಉಸ್ಮಾನ್ ಅವರನ್ನು ನೇಮಕಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಕೋಶಾಧಿಕಾರಿ ಕೆ.ಎಸ್. ಅನಿಲ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ, ಸಂಸ್ಥೆಯ ನಿರ್ದೇಶಕರಾದ ಶರೀಫ್ ಎ., ಮುದಸ್ಸಿರ್, ಫಿರೋಜ್ ಖಾನ್ ಸೇರಿದಂತೆ ಸಂಘಟನೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು.








