ವಿರಾಜಪೇಟೆ, NEWS DESK ಸೆ.7: ಮದರ್ ಥೆರೇಸಾ ಸೇವಾ ಕೇಂದ್ರವು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಲ್ಲಿಸುತ್ತಿರುವ ಸೇವೆ ಹಾಗೂ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರುಗಳು ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಹೇಳಿದರು.
ವಿರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಹಿರಿಯರ ದಿನಾಚರಣೆ ಹಾಗೂ ಮದರ್ ಥೆರೇಸಾ ಜನ್ಮ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರನ್ನು ಗೌರವಿಸುವ ಕಾರ್ಯ ಅತ್ಯಂತ ವಿಶೇಷವಾದದ್ದು. ಮದರ್ ಥೆರೇಸಾ ಸೇವಾ ಕೇಂದ್ರವು ಸಮಾಜದಲ್ಲಿ ಸಾಧನೆ ಮಾಡಿದವರ ವ್ಯಕ್ತಿತ್ವ ಹಾಗೂ ಸೇವೆಯನ್ನು ಗುರುತಿಸಿ ಪ್ರಶಂಸಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಂಸ್ಥೆಯು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸರ್ವರ ಸಹಕಾರದಿಂದ ಪ್ರಗತಿಯತ್ತ ಸಾಗುತ್ತಿದೆ. ಇದು ನಮ್ಮ ಧರ್ಮಕೇಂದ್ರದ ಹೆಮ್ಮೆಯ ಸೇವಾ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜ ಸೇವೆ ಸಲ್ಲಿಸುವಂತಾಗಲಿ ಎಂದು ಅವರು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮದರ್ ಥೆರೇಸಾ ಸೇವಾ ಕೇಂದ್ರದ ಅಧ್ಯಕ್ಷರು ಹಾಗೂ ನಿವೃತ್ತ ಡಿಡಿಪಿಐ ಪೆರಿಗ್ರಿನ್ ಮಚ್ಚಾಡೋ ಮಾತನಾಡಿ, ಮದರ್ ಥೆರೇಸಾ ಸೇವಾ ಕೇಂದ್ರ ಆರಂಭವಾಗಿ ಐದು ವರ್ಷಗಳಾಗಿದ್ದು, ಮದರ್ ಥೆರೇಸಾ ಅವರ ಸೇವಾ ಜೀವನ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.
ಸಾಧನೆಯನ್ನು ಪ್ರೀತಿಯಿಂದ ಮಾಡಿದಾಗ ಅದು ಮಹತ್ತರವಾಗುತ್ತದೆ. ಪ್ರೀತಿಯೇ ಸೇವಾ ಜೀವನದ ಬೆನ್ನೆಲುಬಾಗಿದೆ. ಸೇವಾ ಕೇಂದ್ರದ ವತಿಯಿಂದ ಇದುವರೆಗೆ ಸುಮಾರು ರೂ.14 ಲಕ್ಷ ವೆಚ್ಚದಲ್ಲಿ ಔಷಧೋಪಚಾರಕ್ಕೆ ನೆರವು ನೀಡಲಾಗಿದ್ದು, ರೂ.3 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ. ಸರ್ವ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕೇಂದ್ರವು ಮುನ್ನಡೆಯುತ್ತಿದ್ದು, ಹಿರಿಯರ ಮಾರ್ಗದರ್ಶನ ನಿರಂತರವಾಗಿ ದೊರೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆನೆಡಿಕ್ಟ್ ಸಲ್ಡಾನಾ ಸ್ವರಚಿತ ಹಾಡನ್ನು ಹಾಡಿದರು. ನೋಹ ವಿವೇಕ್ ಹಾಗೂ ವಾಯಿಲೆಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಜಾನ್ ಪ್ರಕಾಶ್ ತಂಡ ಪ್ರಾರ್ಥಿಸಿದರು. ಮದರ್ ಥೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್ ಸ್ವಾಗತಿಸಿದರು. ಖಜಾಂಚಿ ಜೇಮ್ಸ್ ಮೆನೆಜಸ್ ವಂದಿಸಿದರು.
ವೇದಿಕೆಯಲ್ಲಿ ಸಿಸ್ಟರ್ ರೋಸಿ ಡೈಸಾ, ಸಹಾಯಕ ಗುರುಗಳಾದ ವಿಲ್ಫ್ರೆಡ್ ಅಂತೋಣಿ, ಹಿರಿಯರಾದ ಟೋನಿ ಮೆನೆಜಸ್, ಲಿಲ್ಲಿ ಜೋಸೆಫ್ ಹಾಗೂ ಎವೆಲಿನ್ ಪ್ಯಾರೆಟ್ ಮತ್ತು ಕಾರ್ಯದರ್ಶಿ ಅನಿತಾ ನರೋನ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರು, ಮದರ್ ಥೆರೇಸಾ ಸೇವಾ ಕೇಂದ್ರದ ಸದಸ್ಯರು ಹಾಗೂ ಧರ್ಮಕೇಂದ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ನಾಗರಿಕರಿಗೆ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು.
ಸಾಧಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ
ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಮುದ್ರಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೌಲ್ ಕ್ಷೇವಿಯರ್, ವಿರಾಜಪೇಟೆಯ ಆರ್ಮಿ ಆಸ್ಪತ್ರೆಯ ವೈದ್ಯೆ ಡಾ. ಜಾಯಿಲಿನ್ ಮೆನೆಜಸ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಲ್ವಿನ್ ಅಂತೋಣಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅನ್ರಿಟ ಫ್ರೂಟಾಡೊ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಡೀನ್ ಸಾಲ್ವೋ ಡಿಸೋಜ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜೆನ್ಸಿ ಎ. ಡೇವಿಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ 75 ವರ್ಷ ಮೇಲ್ಪಟ್ಟ ಒಟ್ಟು 55 ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.







