ಕಂಬಿಬಾಣೆ–ಅತುರ್‌ನಲ್ಲೂರು, NEWS DESK ಸೆ.7: ಮಲೇಷ್ಯಾದ ಸೆಲಾಂಗೋರ್‌ನಲ್ಲಿ ಸೆ.4ರಿಂದ 6ರವರೆಗೆ ನಡೆದ ಅಂತಾರಾಷ್ಟ್ರೀಯ ಐಟಿಎಫ್ ಟೇಕ್ವಾಂಡೋ ಸ್ಪರ್ಧೆ **‘ಹ್ವಾ ರಂಗ್ ವಾರಿಯರ್ ಏಷ್ಯಾ ಕಪ್ 2026’**ರಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡಗಿನ ಇಬ್ಬರು ಯುವ ಕ್ರೀಡಾಪಟುಗಳು ಪದಕಗಳನ್ನು ಗೆದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಕಂಬಿಬಾಣೆ–ಅತುರ್‌ನಲ್ಲೂರಿನ ಕುಯ್ಯಮುಡಿ ಚರಣ್ ಕುಮಾರ್ ಹಾಗೂ ದೀಕ್ಷಾ ದಂಪತಿಯ ಪುತ್ರಿಯರಾದ ಕುಯ್ಯಮುಡಿ ಕುಮಾರಿ ದೇವಾಂಗಿ ಜನ್ಮೋಹ್ ಮತ್ತು ಕುಯ್ಯಮುಡಿ ಕುಮಾರಿ ತರಂಗ ಜನ್ಮೋಹ್ ಅವರು ಭಾರತ ತಂಡವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.
ಕುಯ್ಯಮುಡಿ ಕುಮಾರಿ ದೇವಾಂಗಿ ಜನ್ಮೋಹ್ ಅವರು ತಂಡ ಹಾಗೂ ವೈಯಕ್ತಿಕ ಸ್ಪಾರಿಂಗ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಯಾವುದೇ ವಿಶ್ರಾಂತಿಯಿಲ್ಲದೆ ಸತತ ಎಂಟು ಪಂದ್ಯಗಳಲ್ಲಿ ಸೆಣಸಾಡಿದ್ದಾರೆ. ವೈಯಕ್ತಿಕ ಸ್ಪಾರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು, ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೇ ಭಾರತ ತಂಡದ ಸದಸ್ಯೆಯಾಗಿದ್ದ ಕುಯ್ಯಮುಡಿ ಕುಮಾರಿ ತರಂಗ ಜನ್ಮೋಹ್ ಅವರು ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಮೂರು ದಿನಗಳ ಕಾಲ ನಡೆದ ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಲೇಷ್ಯಾದ ವಿವಿಧ ರಾಜ್ಯಗಳ ಹಲವು ಕ್ಲಬ್‌ಗಳು ಹಾಗೂ ಅಕಾಡೆಮಿಗಳ ಕ್ರೀಡಾಪಟುಗಳ ಜೊತೆಗೆ ವಿವಿಧ ದೇಶಗಳ ಅಂತಾರಾಷ್ಟ್ರೀಯ ತಂಡಗಳೂ ಭಾಗವಹಿಸಿದ್ದವು. ಹಲವು ರಿಂಗ್‌ಗಳಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆದವು.
ಕರಾಟೆ, ಕುಂಗ್-ಫೂ ಮುಂತಾದ ಸಮರ ಕಲೆಗಳಂತೆ ಟೇಕ್ವಾಂಡೋ ಕೂಡ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಕ್ರೀಡೆಯಾಗಿದೆ. ದೇಹಕ್ಕೆ ಎಷ್ಟು ಸವಾಲಿನದೋ, ಮನಸ್ಸಿಗೂ ಅಷ್ಟೇ ಸವಾಲಿನ ಕ್ರೀಡೆಯಾಗಿರುವ ಟೇಕ್ವಾಂಡೋದಲ್ಲಿ ಈ ಇಬ್ಬರು ಯುವತಿಯರು ತೋರಿರುವ ಸಾಧನೆ ಗಮನಾರ್ಹವಾಗಿದೆ.
ಮನೆಯಿಂದ ದೂರವಿದ್ದು, ಅಪರಿಚಿತ ಆಹಾರ, ಸಮರ್ಪಕ ನಿದ್ರೆಯ ಕೊರತೆ ಸೇರಿದಂತೆ ಹಲವು ಕಠಿಣ ಪರಿಸ್ಥಿತಿಗಳ ನಡುವೆಯೂ ಧೈರ್ಯದಿಂದ ಸ್ಪರ್ಧಿಸಿ ಪದಕಗಳನ್ನು ಗೆದ್ದಿರುವ ದೇವಾಂಗಿ ಜನ್ಮೋಹ್ ಹಾಗೂ ತರಂಗ ಜನ್ಮೋಹ್ ಅವರ ಸಾಧನೆ ಕೊಡಗು ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.







