
ಮಡಿಕೇರಿ ಸೆ.28 NEWS DESK : ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾ ಕೂಟ ಅ.4 ರಂದು ಭಾನುವಾರ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಅಧ್ಯಕ್ಷ ಎಂ.ಕೆ.ಸಂತೋಷ್ ವಹಿಸಲಿದ್ದು, ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ.ದೇವಪ್ಪ ಕಟ್ಟೆಮಾಡು ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ, ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾ ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ನರಸಿಂಹ, ಜಿಲ್ಲಾ ಕಾರ್ಯದರ್ಶಿ ಹೊವಮ್ಮ ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕ್ರೀಡಾ ಕೂಟದಲ್ಲಿ 5 ರಿಂದ 10 ವರ್ಷದ ಮಕ್ಕಳಿಂದ 50 ವರ್ಷ ಮೇಲ್ಪಟ್ಟವರವರೆಗೆ ವಿವಿಧ ವಯೋಮಾನದವರಿಗೆ ಓಟದ ಸ್ಪರ್ಧೆ ನಡೆಯಲಿದೆ. ಜತೆಗೆ ವೇಗದ ನಡಿಗೆ, ಕಂಬ ಸುತ್ತಿ ಓಡುವುದು, ಮಡಿಕೆ ಹೊಡೆಯುವುದು, ಜೋಡಿ ಓಟ, ಹಗ್ಗ ಜಗ್ಗಾಟ(7 ಜನರ ತಂಡ), ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಉಪ್ಪುಮೂಟೆ(ಬೆನ್ನಿನ ಮೇಲೆ ಓರ್ವ ವ್ಯಕ್ತಿಯನ್ನು ಹೊತ್ತು ಓಡುವುದು) ಓಟ ಮತ್ತು ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆ ಸೇರಿದಂತೆ 14 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಅಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಎಂ.ಎಂ.ಪರಮೇಶ್ವರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜದ ಹಿರಿಯರು ಮರಾಟಿ ಸೋಮಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಮರಾಟಿ ಒಕ್ಕೂಟ ಬೆಂಗಳೂರು ಅಧ್ಯಕ್ಷ ಕೆ.ಸುಂದರ ನಾಯ್ಕ, ಕರ್ನಾಟಕ ಮರಾಟಿ ಒಕ್ಕೂಟ ಮೂಡಬಿದ್ರೆ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಕರ್ನಾಟಕ ಮರಾಟಿ ಒಕ್ಕೂಟ ಪುತ್ತೂರು ಕಾರ್ಯದರ್ಶಿ ವಾಸು ನಾಯ್ಕ, ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್.ನಾಯ್ಕ ಸೇರಿದಂತೆ ಉಪಸಮಿತಿಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.









