ಮಡಿಕೇರಿ, NEWS DESK ಅ.8: ಸಣ್ಣ ಭಾಷೆಗಳನ್ನು ಜೀವಂತವಾಗಿಡುವ ಉದ್ದೇಶದಿಂದ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿರುವ ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡವ ಭಾಷೆಯ ‘ಬೇರ್’ ಚಿತ್ರ ಆಯ್ಕೆಯಾಗಿದೆ.
ಬೆಂಗಳೂರಿನ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಅ.10 ಮತ್ತು 11ರಂದು ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಸಣ್ಣ ಭಾಷೆಗಳನ್ನು ಪ್ರತಿನಿಧಿಸುವ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಇದರ ಭಾಗವಾಗಿ ಅ.11ರಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನ 2ನೇ ಹಂತದಲ್ಲಿ ‘ಬೇರ್’ ಚಿತ್ರ ಪ್ರದರ್ಶನಗೊಳ್ಳಲಿದೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬೇರ್’ ಚಿತ್ರವು ಕೊಡವ ಕಾದಂಬರಿ ಆಧಾರಿತವಾಗಿದ್ದು, ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
‘ಕೂರ್ಗ್ ಕಾಫಿವುಡ್ ಮೂವೀಸ್’ ಬ್ಯಾನರ್‌ನಡಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಅವರ ಪತ್ನಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಮೊಣ್ಣಂಡ ನೇಹ ಮೋಟಯ್ಯ, ಉಳುವೊಂಗಡ ಅಮಿತ್ ಬೋಪಣ್ಣ, ಮಂಡಿರ ಪದ್ಮ ಬೋಪಯ್ಯ, ಗುಮ್ಮಟ್ಟಿರ ಕಿಶು ಉತ್ತಪ್ಪ, ವಾಂಚಿರ ವಿಠಲ್ ನಾಣಯ್ಯ, ಪುಲಿಯಂಡ ಯಾಮಿನಿ, ಕೋಲೆಯಂಡ ನಿಶಾ ಮೋಹನ್, ಬಾಲ ನಟಿ ಕೊಟ್ಟುಕತ್ತಿರ ತೇಜಲ್ ಕಾರ್ಯಪ್ಪ, ತನಂ ಕಾರ್ಯಪ್ಪ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ವಿಠಲ್ ರಂಗದೋಳ್ ಸಂಗೀತ ನೀಡಿದ್ದು, ಈರಮಂಡ ವಿಜಯ್ ಉತ್ತಯ್ಯ ನಿರ್ಮಾಣ ವ್ಯವಸ್ಥಾಪಕರಾಗಿ, ಈರಮಂಡ ಹರಿಣಿ ವಿಜಯ್ ಹಾಗೂ ನಾಗರಾಜ್ ನೀಲ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರದೀಪ್ ಆರ್ಯನ್ ಛಾಯಾಗ್ರಹಣ, ಮುತ್ತುರಾಜು ಪಿ. ಹಾಗೂ ದ್ರೋಣ್ ನಿರಂಜನ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಅ.10 ಮತ್ತು 11ರಂದು ಬೆಳಿಗ್ಗೆ 11.30ರಿಂದ ಸಂಜೆ 7ರವರೆಗೆ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ವಿವಿಧ ಸಣ್ಣ ಭಾಷೆಗಳ ಚಿತ್ರಗಳ ಪ್ರದರ್ಶನದೊಂದಿಗೆ ಆಯಾ ಭಾಷೆ, ಸಾಹಿತ್ಯ ಮತ್ತು ಸಿನಿಮಾ ಕುರಿತ ಸಂವಾದಗಳು ನಡೆಯಲಿವೆ.
ಕೊಡವ ಭಾಷೆ ಮತ್ತು ಸಾಹಿತ್ಯದ ನೆಲೆಯಿಂದ ಮೂಡಿಬಂದಿರುವ ‘ಬೇರ್’ ಚಿತ್ರವು ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಕೊಡಗಿನ ಸಿನಿಮಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

















