ನಾಪೋಕ್ಲು, NEWS DESK ಅ.14: ಸರ್ಫೇಸಿ ಕಾಯ್ದೆಯಿಂದ ಸಂಕಷ್ಟ ಎದುರಿಸುತ್ತಿರುವ ಕಾಫಿ ಬೆಳೆಗಾರರ ಹಿತಾಸಕ್ತಿ ರಕ್ಷಿಸಲು ಕರ್ನಾಟಕ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುವ ಅಗತ್ಯವಿದೆ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಕಾವೇರಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಫೇಸಿ ಕಾಯ್ದೆಯ ಸಮಸ್ಯೆ ಮುಖ್ಯವಾಗಿ ಕರ್ನಾಟಕದ ಕಾಫಿ ಬೆಳೆಗಾರರನ್ನು ಬಾಧಿಸುತ್ತಿದ್ದು, ಈ ಅಂಶವನ್ನು ನ್ಯಾಯಾಲಯದ ಮುಂದೆ ಪ್ರಬಲವಾಗಿ ಮಂಡಿಸಬೇಕಾಗಿದೆ. ಕೇರಳ ಮತ್ತು ತಮಿಳುನಾಡಿನ ಬೆಳೆಗಾರರಿಗೆ ಈ ಕಾಯ್ದೆ ಏಕೆ ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ
ರಾಜಕೀಯ ನಾಯಕರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಡಾ. ಕಾವೇರಪ್ಪ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ ಮೌಖಿಕ ಭರವಸೆ ಮಾತ್ರ ದೊರೆತಿದೆ. ಇಂತಹ ಭರವಸೆಗಳಿಂದ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಗ್ಗಟ್ಟಿನ ಹೋರಾಟಕ್ಕೆ ಕರೆ
ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರನ್ನು ರಕ್ಷಿಸಲು ಕಾಫಿ ಬೆಳೆಯುವ ಪ್ರದೇಶಗಳ ಎಲ್ಲ ರಾಜಕೀಯ ನಾಯಕರು ಒಗ್ಗೂಡಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರ ಮೇಲೆ ಒತ್ತಡ ಹೇರಬೇಕು. ಸಂಸತ್ತಿನಲ್ಲಿ ಸರ್ಫೇಸಿ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ರಾಜ್ಯ ಸರ್ಕಾರವೂ ಕೇಂದ್ರದೊಂದಿಗೆ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.70ರಷ್ಟಿದ್ದು, ರಾಜ್ಯದ ಕಾಫಿ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೂ ಇದೆ. ಕಾಫಿ ಜಾಗತಿಕವಾಗಿ ಪ್ರಮುಖ ವಾಣಿಜ್ಯ ಸರಕುಗಳಲ್ಲಿ ಒಂದಾಗಿದ್ದು, ದೇಶಕ್ಕೆ ಗಣನೀಯ ವಿದೇಶಿ ವಿನಿಮಯವನ್ನು ತಂದುಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಸ್ಯೆಯನ್ನು ನಿರ್ಲಕ್ಷಿಸದೆ ತಕ್ಷಣವೇ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಡಾ. ಕಾವೇರಪ್ಪ ಮನವಿ ಮಾಡಿದ್ದಾರೆ.
ವರದಿ: ದುಗ್ಗಳ ಸದಾನಂದ

















