ಸುಂಟಿಕೊಪ್ಪ, NEWS DESK ನ.1: ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವುದರೊಂದಿಗೆ ರಾಜ್ಯದ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್ ಹೇಳಿದರು.
ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ವೃತ್ತದಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವವು ಇತರ ಹಬ್ಬಗಳಿಗಿಂತಲೂ ಮಹತ್ವದ ಹಬ್ಬವಾಗಿದ್ದು, ರಾಜ್ಯದ ಪ್ರತಿಯೊಬ್ಬರೂ ಸಡಗರ ಸಂಭ್ರಮದಿಂದ ಆಚರಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮಗ್ರತೆಯನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಕಳೆದ 40 ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ವೃತ್ತದಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆಯಲ್ಲಿ ಗ್ರಾಮ ಪಂಚಾಯಿತಿಯೂ ಕೈಜೋಡಿಸಿದರೆ ಮತ್ತಷ್ಟು ಮೆರಗು ದೊರೆಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕನ್ನಡ ಸಾಹಿತ್ಯ ಪರಿಷತ್ನೊಂದಿಗೆ ಒಗ್ಗೂಡಿ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ಹಿಂದೆ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಹಿರಿಯರು ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸುವ ಮೂಲಕ ಏಕೀಕೃತ ಕರ್ನಾಟಕವನ್ನಾಗಿ ರೂಪಿಸಿದ್ದಾರೆ. ಆದರೆ ಇಂದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎಷ್ಟರಮಟ್ಟಿಗೆ ಉಳಿಸಿ ಬೆಳೆಸಿದ್ದೇವೆ ಎಂಬ ಪ್ರಶ್ನೆ ಎದುರಾಗಿದೆ. ನ್ಯಾಯಾಲಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಆದೇಶಗಳು ಹಾಗೂ ಮಾಹಿತಿ ಪತ್ರಗಳಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಕನ್ನಡದ ಮಹತ್ವ ಕಡಿಮೆಯಾಗುತ್ತಿದೆ. ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಮಹಾರಾಷ್ಟ್ರಕ್ಕೆ ಸೇರಿರುವ ಕೊಲ್ಲಾಪುರ, ಸಾಂಗ್ಲಿ, ಸೋಲಾಪುರ ಹಾಗೂ ಕೇರಳಕ್ಕೆ ಸೇರಿರುವ ಕಾಸರಗೋಡು ಪ್ರದೇಶಗಳ ಕನ್ನಡದ ನಂಟನ್ನು ಮರೆಯಬಾರದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಎಸ್.ಜಿ.ಶ್ರೀನಿವಾಸ್ ಅವರು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತಿಗಳು ರಚಿಸಿರುವ ಗ್ರಂಥಗಳು ಮತ್ತು ಶಿಲ್ಪಕಲೆಗಳು ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುತ್ತವೆ. ಇವುಗಳನ್ನು ಇಂದಿನ ಯುವಪೀಳಿಗೆ ವೀಕ್ಷಿಸಿ, ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉದ್ಯೋಗ ಹಾಗೂ ಜೀವನ ರೂಪಿಸಿಕೊಳ್ಳಲು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಜನರಿಗೆ ಕನ್ನಡ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಎಲ್ಲರೂ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ವತಿಯಿಂದ ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಜಾ ಹಾಗೂ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹ್ಯಾರನ್ ಅವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೆ, ಐದು ಬಡ ಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್. ಸಬಾಸ್ಸಿನ್ ವಹಿಸಿದ್ದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾ ಮೇದಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ. ಯಶೋಧರ ಪೂಜಾರಿ, ಚುಟುಕು ಸಾಹಿತಿ ಹಾಗೂ ಮಾಜಿ ಅಧ್ಯಕ್ಷ ವಹೀದ್ ಜಾನ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಗ್ಲೇನ್ ಮೆನೆಜಸ್, ಪದಾಧಿಕಾರಿಗಳಾದ ವಿಜಯಕುಮಾರ್, ನಿಕೇಶ್, ಶಶಾಂಕ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕುಮಾರ್, ಕಸಾಪ ಹಿರಿಯ ಸದಸ್ಯರಾದ ಕೆ.ಪಿ. ಜಗನ್ನಾಥ್, ಡಿ. ನರಸಿಂಹ, ಬಿ.ಎಸ್. ಸದಾಶಿವ ರೈ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮಧು, ಕಸಾಪ ಕಾರ್ಯದರ್ಶಿ ಕೆ.ಎಸ್. ಅನಿಲ್ ಕುಮಾರ್, ಖಜಾಂಚಿ ಸತೀಶ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಕೀಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

















