ಸುಂಟಿಕೊಪ್ಪ, NEWS DESK ನ.1: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನುವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈ ಪ್ರಯುಕ್ತ ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಹೂವುಗಳು ಸೇರಿದಂತೆ ವಿವಿಧ ಹಣ್ಣು ಮತ್ತು ಫಲವಸ್ತುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಸಭಾಪಾಲಕರಾದ ಘನ. ಜೈಸನ್ ಗೌಡರ್ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಪ್ರಾರ್ಥನೆ ಹಾಗೂ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಕೃಷ್ಣಾಪುರದ ಸಿಎಸ್ಐ ಕಾರುಣ್ಯ ದೇವಾಲಯದ ಘನ. ಸ್ಟೀವನ್ ಸರ್ವೋತ್ತಮ್ ಮಾತನಾಡಿ, ದೇವಾಲಯಗಳ ವಾರ್ಷಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖ ಸ್ಥಾನ ಪಡೆದಿದೆ. ಸತ್ಯವೇದ ಅಥವಾ ಬೈಬಲ್ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನಗಳು ಹಾಗೂ ಫಲವಸ್ತುಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸಮರ್ಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಃ ಸಮರ್ಪಿಸಿಕೊಂಡು, ಯೇಸುಸ್ವಾಮಿಯ ಕೃಪೆ ಹಾಗೂ ಆಶೀರ್ವಾದಗಳಿಗೆ ಪಾತ್ರರಾಗಿ ಜೀವನವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬೆಳಗಿನ ಪ್ರಾರ್ಥನೆ ಹಾಗೂ ಪೂಜಾ ವಿಧಿವಿಧಾನಗಳನ್ನು ಘನ. ಸ್ಟೀವನ್ ಸರ್ವೋತ್ತಮ್ ಮತ್ತು ಸುಂಟಿಕೊಪ್ಪ ಇಮ್ಯಾನುವೆಲ್ ದೇವಾಲಯದ ಸಭಾಪಾಲಕರಾದ ಘನ. ಜೈಸನ್ ಗೌಡರ್ ನೆರವೇರಿಸಿದರು.
ನಂತರ ಭಕ್ತಾದಿಗಳು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ ವಿವಿಧ ಫಲವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಸಾಮೂಹಿಕ ಭೋಜನದೊಂದಿಗೆ ಸಂಜೆಯವರೆಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಸುಂಟಿಕೊಪ್ಪ ಸಭಾಪಾಲಕರಾದ ಮಧುಕಿರಣ್ ಅವರ ಉಸ್ತುವಾರಿಯಲ್ಲಿ ದೇವಾಲಯದ ಭಕ್ತಾದಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಭಾಪಾಲನಾ ಸಮಿತಿಯ ಸದಸ್ಯರು ಹಾಗೂ ಸಭೆಯ ಭಾಂದವರು ಹಬ್ಬದಲ್ಲಿ ಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ಪಾಲ್ಗೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಆತ್ಮೀಯವಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

















