ಮಡಿಕೇರಿ, NEWS DESK ನ.1: ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ 2ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ರೋಚಕ ತೆರೆ ಬಿದ್ದಿದೆ.
ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಮೂರ್ನಾಡುವಿನ ಎಂಆರ್ಎಫ್ ತಂಡ, ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ, ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ ಕೂರ್ಗ್ ವಂಡರ್ ಹಾಗೂ ಪುರುಷರ ಮಾಸ್ಟರ್ಸ್ ವಿಭಾಗದಲ್ಲಿ ಕೊಡವ ಹಾಕಿ ಅಕಾಡೆಮಿ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.
ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆಗೆ ಜಯ
ಭಾನುವಾರ ಬೆಳಗ್ಗೆ ನಡೆದ ಮೊದಲ ಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ ಹಾಗೂ ಪೊನ್ನಂಪೇಟೆ ಕ್ರೀಡಾ ಶಾಲೆಯ ಬಾಲಕಿಯರ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ರೋಚಕ ಹಣಾಹಣಿಯಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆಯ ತಂಡ 1-0 ಗೋಲುಗಳ ಅಂತರದಿಂದ ಕೂಡಿಗೆ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಕೂರ್ಗ್ ವಂಡರ್ ಚಾಂಪಿಯನ್
ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ ಕೂರ್ಗ್ ವಂಡರ್ ಹಾಗೂ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸಡನ್ ಡೆತ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಈ ವೇಳೆ ರಾಯಲ್ ಚಾಲೆಂಜರ್ಸ್ 3 ಗೋಲು ದಾಖಲಿಸಿದರೆ, ಕೂರ್ಗ್ ವಂಡರ್ 4 ಗೋಲು ಬಾರಿಸಿ ಜಯಭೇರಿ ಬಾರಿಸಿತು.
ಪುರುಷರ ವಿಭಾಗದಲ್ಲಿ ಕೊಡವ ಹಾಕಿ ಅಕಾಡೆಮಿಗೆ ಪ್ರಶಸ್ತಿ
ಪುರುಷರ ಮಾಸ್ಟರ್ಸ್ ವಿಭಾಗದಲ್ಲಿ ಕೊಡವ ಹಾಕಿ ಅಕಾಡೆಮಿ ಹಾಗೂ ಕೂರ್ಗ್ ಡೈನಮೆಂಟ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾದವು. ಕೊಡವ ಹಾಕಿ ಅಕಾಡೆಮಿ 4-2 ಗೋಲುಗಳ ಅಂತರದಿಂದ ಕೂರ್ಗ್ ಡೈನಮೆಂಟ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ಎಂಆರ್ಎಫ್ ತಂಡಕ್ಕೆ ರೋಲಿಂಗ್ ಟ್ರೋಫಿ
ಬಾಲಕರ ಸಬ್ ಜೂನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ ಮೂರ್ನಾಡುವಿನ ಎಂಆರ್ಎಫ್ ತಂಡ ಹಾಗೂ ವಿರಾಜಪೇಟೆ ಕೊಡವ ಸಮಾಜ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ ತಂಡಗಳು ಸೆಣಸಾಡಿದವು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎಂಆರ್ಎಫ್ ತಂಡ 3-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರತಿಷ್ಠಿತ ಫ್ಯಾಪ್ ಕಪ್ ರೋಲಿಂಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯಾವಳಿಯ ಅಂತ್ಯದಲ್ಲಿ ವಿಜೇತ ಹಾಗೂ ರನ್ನರ್ಸ್ ತಂಡಗಳಿಗೆ ಗಣ್ಯರು ಟ್ರೋಫಿ ಮತ್ತು ನಗದು ಬಹುಮಾನಗಳನ್ನು ವಿತರಿಸಿದರು. ಉತ್ತಮ ಗೋಲ್ ಕೀಪರ್, ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರ ಹಾಗೂ ಉತ್ತಮ ಆಟಗಾರ ಸೇರಿದಂತೆ ವೈಯಕ್ತಿಕ ಸಾಧಕರಿಗೂ ನಗದು ಮತ್ತು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಹಾಕಿ ಆಟಗಾರರಿಗೆ ಉತ್ತಮ ವೇದಿಕೆ: ಗಣ್ಯರ ಅಭಿಪ್ರಾಯ
ಕೊಡವ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಹಾಕಿ ಕ್ರೀಡೆಗೆ ಸೂಕ್ತ ಬೆಂಬಲ ದೊರೆಯುತ್ತಿದ್ದು, ಇದೀಗ ಕೇರಳವೂ ಈ ಸಾಲಿಗೆ ಸೇರ್ಪಡೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾಕಿ ಕ್ರೀಡಾ ಪ್ರೇಮಿ ಹಾಗೂ ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರು ಹಾಕಿ ಕ್ರೀಡೆಗೆ ಬೆಂಬಲ ನೀಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕೇರಳ ರಾಜ್ಯವೂ ಹಾಕಿ ಕ್ರೀಡೆಗೆ ಬೆಂಬಲ ನೀಡುತ್ತಿರುವುದು ಕ್ರೀಡೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಯುವ ಆಟಗಾರರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಒಲಿಂಪಿಯನ್ ಪೈಕೇರ ಕಾಳಯ್ಯ ಮಾತನಾಡಿ, ಹಾಕಿ ಕೂರ್ಗ್ ಮತ್ತು ಹಾಕಿ ಅಕಾಡೆಮಿ ಸಂಸ್ಥೆಗಳು 12 ವರ್ಷ ವಯೋಮಾನದೊಳಗಿನ ಕಿರಿಯ ಆಟಗಾರರಿಗೆ ಉತ್ತಮ ತರಬೇತಿ ಹಾಗೂ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳು ಹಾಕಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುತ್ತಾಮನೆ ವಿದ್ಯಾ ಜಗದೀಶ್ ಅವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು. ಶಿರಂಗಳ್ಳಿ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಕೊಡವ ಸಾಂಸ್ಕೃತಿಕ ನೃತ್ಯ ಪ್ರದರ್ಶನವೂ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಒಲಿಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ, ಪಂದ್ಯಾವಳಿ ನಿರ್ದೇಶಕ ಕರವಂಡ ಅಪ್ಪಣ್ಣ, ಹಿರಿಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖರಾದ ಮೂಸಾ, ಜಾವಿದ್, ರಾಜಶೇಖರ್, ಜಾನ್ಸನ್ ಮಾಸ್ಟರ್, ಮೊಯ್ದು, ಹಾಕಿ ತರಬೇತುದಾರ ಅಮ್ಮಂಡಿರ ಚೇತನ್, ಸಾಯಿ ಕ್ರೀಡಾ ಶಾಲೆ ನಿರ್ದೇಶಕ ಮಿನ್ನಿ ಉನ್ನಿರಾಜ್ ಮತ್ತಿತರರು ಉಪಸ್ಥಿತರಿದ್ದರು.

















