ಮಡಿಕೇರಿ NEWS DESK ನ.27 : ನಾನು ಕೇರಳದಿಂದ ಬಂದಿರುವ ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಇಡೀ ಮಲಯಾಳಿ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೂ ಸಂಸ್ಕೃತಿಯನ್ನು ಒಪ್ಪದ ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾತನಾಡಿದ್ದೇನೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಬಾರದು. ನಾನೊಬ್ಬ ಭಾರತೀಯ ಹಾಗೂ ಕನ್ನಡಿಗ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಾನು ಮಾತನಾಡಿದ್ದೇನೆ ಎಂದು ತಿಳಿಸಿದರು. ಕೇರಳದಿಂದ ತರಕಾರಿ ಖರೀದಿಸಲು ಬರುತ್ತಿದ್ದವರು ಇದೀಗ ಕರ್ನಾಟಕದಲ್ಲಿ ಜಮೀನುಗಳನ್ನು ಖರೀದಿಸಿ ಮಾಲೀಕರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಪ್ರಭಾವ ಹೆಚ್ಚಾಗಲು ಕೇರಳದವರೇ ಕಾರಣ ಎಂದು ಆರೋಪಿಸಿದರು. ಮೈಸೂರು, ಬೆಂಗಳೂರು, ಗುಂಡ್ಲುಪೇಟೆ ಹಾಗೂ ಕೊಡಗಿನಲ್ಲಿ ಕೇರಳದವರ ಪ್ರಭಾವ ಹೆಚ್ಚಾಗುತ್ತಿದೆ. ಕರ್ನಾಟಕದ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ, ಹಿಂದೂಗಳು ಜಾತಿಯ ಹೆಸರಿನಲ್ಲಿ ವಿಭಜನೆಯಾಗದೆ ಒಗ್ಗಟ್ಟಾಗಬೇಕು. ಕೊಡಗಿನ ಭೂಮಾಲೀಕರು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಅಥವಾ ಲೀಸ್ ಗೂ ನೀಡಬಾರದು. ಭೂಮಿ ಮಾರಾಟವಾದರೆ ಕೊಡಗಿನ ಸಂಸ್ಕೃತಿಗೆ ಅಪಾಯ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.


































