ಮಡಿಕೇರಿ ಮಾ.10 : ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಹಿರಿಯ ಕಲಾವಿದೆ ಮೈತಾಡಿ ಗ್ರಾಮದ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರನ್ನು ಮನೆಗೆ ತೆರಳಿ ಸನ್ಮಾನಿಸಲಾಯಿತು. ಕಿರಿಯ ವಯಸ್ಸಿನಲ್ಲಿ ಉಮ್ಮತ್ತಾಟ್, ಪೌರಾಣಿಕ ನಾಟಕ, ಕೊಡವ ಹಾಡುಗಳನ್ನು ಕಲೆಯಾಗಿ ರೂಪಿಸಿಕೊಂಡು 75ರ ಇಳಿ ವಯಸ್ಸಿನಲ್ಲೂ ಕಿರಿಯರಿಗೆ ತರಬೇತಿ ನೀಡುತ್ತಿರುವ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಕೂಟದ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್ ಮಾತನಾಡಿ, ಸೇವೆ, ಸಾಧನೆ ಮೂಲಕ ಸಾಕಷ್ಟು ಮಹಿಳೆಯರು ಸಮಾಜಕ್ಕೆ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಇಂತಹವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಲಾಗುತ್ತಿದೆ ಎಂದರು. ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಲಹೆಗಾರ ಚಂಗುಲಂಡ ಸೂರಜ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ ಇದ್ದರು.








