ವಿರಾಜಪೇಟೆ ಮಾ.11 : ವಿರಾಜಪೇಟೆ ತಾಲೂಕಿನ ವಿ.ಬಾಡಗ ಗ್ರಾಮದ ಪೊವ್ವದಿ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜನಿತಾ ಮಹಿಳಾ ದಿನಾಚರಣೆಯ ವಿಶೇಷತೆ ಬಗ್ಗೆ ಮಾತನಾಡಿದರು.
ಪೊವ್ವದಿ ಮಹಿಳಾ ಸಮಾಜದ ಅಧ್ಯಕ್ಷೆ ಪರ್ಲ್ ಮುತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಂತರಾಷ್ಟ್ರೀಯ ಅಥ್ಲೆಟ್ ಚೇಮಿರ ಪ್ರೇಮಾ ಸೀತಮ್ಮ, ಊರಿನ ಹಿರಿಯರಾದ ಅಪ್ಪಂಡೆರಂಡ ಚೋಂದವ್ವ ಪೂವಯ್ಯ ವಿ.ಬಾಡಗ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕೋಲತಂಡ ಭಾರತಿ ಮಂದಣ್ಣ ಅವರನ್ನು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೇಮೀರ ಪ್ರೇಮ ಸೀತಮ್ಮ, ತಮ್ಮ ಸಾಧನೆಯ ಬಗ್ಗೆ ಮಾತನಾಡಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಸಮಾಜದ ಆಡಳಿತ ಮಂಡಳಿ ಸದಸ್ಯರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಭಾ ಕಾರ್ಯಕ್ರಮದ ನಂತರ ಮಹಿಳೆಯರಿಗೆ ಆಟೋಟ ಸ್ಪರ್ಧೆ, ಮನರಂಜನಾ ಕಾರ್ಯಕ್ರಮ ನಡೆಸಲಾಯಿತು.







