Advertisement
9:56 AM Sunday 3-December 2023

*ಮಾಲ್ದಾರೆ- ಹುಂಡಿಯಲ್ಲಿ ಆತಂಕ ಸೃಷ್ಟಿಸಿರುವ ಗಜ ಪರಿವಾರ*

12/09/2023

ಮಡಿಕೇರಿ ಸೆ.12 : ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಕೈಮೀರುತ್ತಿದೆ. ಸಿದ್ದಾಪುರದ ಮಾಲ್ದಾರೆ- ಹುಂಡಿ ಗ್ರಾಮ ವ್ಯಾಪ್ತಿಯಲ್ಲಿ 20 ಕ್ಕೂ ಅಧಿಕ ಸಂಖ್ಯೆಯ ಗಜ ಪರಿವಾರ ಹಾಡಹಗಲೇ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಜೀವಭಯ ಮೂಡಿದೆ.
ಕಳೆದ ಒಂದು ವಾರದಿಂದ ತೋಟದಿಂದ ತೋಟಕ್ಕೆ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಅಪಾರ ನಷ್ಟ ಉಂಟು ಮಾಡಿವೆ. ಮೂರಕ್ಕೂ ಹೆಚ್ಚು ಮರಿಗಳ ಸಹಿತ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಗಜ ಪರಿವಾರದಿಂದ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಬರುತ್ತಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಧೈರ್ಯ ತೋರುತ್ತಿಲ್ಲ. ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ.
ಮರಿಗಳು ಜೊತೆಯಲ್ಲೇ ಇರುವುದರಿಂದ ಮನುಷ್ಯರ ಮೇಲೆ ದಿಢೀರ್ ದಾಳಿ ನಡೆಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಅರಣ್ಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿದರೂ ಮರಳಿ ಬಂದು ತೋಟಗಳಲ್ಲಿ ನೆಲೆ ನಿಲ್ಲುತ್ತಿವೆ. ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದು, ಅರಣ್ಯ ಇಲಾಖೆ ಕೂಡ ಅಸಹಾಯಕವಾಗಿದೆ.
ಕಾಡಾನೆಗಳ ದಾಳಿಯನ್ನು ತಡೆಯಲು ಸರ್ಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಕಳೆದ ಒಂದು ದಶಕದಿಂದ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಕಾಡಾನೆ ದಾಳಿಗೆ ಸಿಲುಕಿ ಅಮಾಯಕ ಜೀವಗಳು ನಿರಂತರವಾಗಿ ಬಲಿಯಾಗುತ್ತಿವೆಯೇ ಹೊರತು ದಾಳಿ ತಡೆಗೆ ಇನ್ನೂ ಕೂಡ ಮಾರ್ಗೋಪಾಯಗಳನ್ನು ಕಂಡುಕೊoಡಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಮಾಲ್ದಾರೆ- ಹುಂಡಿ ಗ್ರಾಮ ಗಜ ದಿಗ್ಬಂಧನದAತ್ತಾಗಿದೆ.