ಸೋಮವಾರಪೇಟೆ ಮೇ 4 NEWS DESK : ಕಾಡಾನೆಯೊಂದು ರಸ್ತೆಗೆ ಅಡ್ಡಬಂದ ಪರಿಣಾಮ, ಬೈಕ್ ಸಹಿತ ಸವಾರ ಆನೆಗೆ ಡಿಕ್ಕಿ ಹೊಡೆದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೇಳೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ 9.30ರ ಸುಮಾರಿಗೆ ಬೇಳೂರು ಗ್ರಾಮಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಹಾನಗಲ್ಲುಬಾಣೆ ನಿವಾಸಿ ರಾಮು ಎಂಬವರಿಗೆ, ಕಾಟ್ನಮನೆ ಜಂಕ್ಷನ್‌ನ ತಿರುವಿನಲ್ಲಿ ದಿಢೀರನೆ ಕಾಡಾನೆ ಅಡ್ಡ ಬಂದಿದೆ. ಈ ಸಂದರ್ಭ ನಿಯಂತ್ರಣ ತಪ್ಪಿ ಬೈಕ್ ಆನೆಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ರಾಮು ಅವರನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು, ಅದೃಷ್ಟವಶಾತ್ ಸ್ಥಳದಿಂದ ಓಡಿ ಪಾರಾಗಿದ್ದಾರೆ. ರಾಮು ಅವರ ಬಲಗೈ ಹಾಗೂ ಎಡಗಾಲಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.








