
ಮಡಿಕೇರಿ ಮಾ.11 NEWS DESK : ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಿಂದ ಸಹಕಾರ ಕ್ಷೇತ್ರದ ವಿವಿಧ ವಲಯಗಳ ಬವಲರ್ಧನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಸಹಕಾರ ಸಂಘಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎನ್.ಎಂ.ಉಮೇಶ್ ಉತ್ತಪ್ಪ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು ಮತ್ತು ಸೈಬರ್ ಭದ್ರತೆ ಕುರಿತು ನಗರದ ಮಯೂರ ವ್ಯಾಲಿ ವ್ಯೂ ಹೊಟೇಲ್‍ನಲ್ಲಿ ನಡೆದ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದೊಂದಿಗೆ ಸಾಮಾಜಿಕ ವಲಯದ ಹಲವು ಸಮಸ್ಯೆಗಳಿಗೂ ಸರ್ಕಾರದ ಮಟ್ಟಿನಲ್ಲಿ ಪರಿಹರಿಸಲು ಸಹ ಪ್ರಯತ್ನಿಸಲಾಗುತ್ತಿರುವ ಯೂನಿಯನ್ ಅಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದರು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಉತ್ತಮ ಜೀವನಕ್ಕಾಗಿ ಸದಾ ಕಾಲ ನಾವು ಕಲಿಯುತ್ತಿದಲ್ಲಿ ಕೌಶಲ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಪ್ರತಿ ವರ್ಷದಂತೆ ಇಂದು ಸಹ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಹೈಟೆಕ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಕ್ತ ಹಾಗೂ ಪ್ರಶಾಂತ ವಾತಾವರಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲೆಯ ಸಹಕಾರ ಸಂಘಗಳು ತಮ್ಮ ಲಾಭಾಂಶದಲ್ಲಿ ನೀಡುವ ಶಿಕ್ಷಣ ನಿಧಿಯನ್ನು ನೇರವಾಗಿ ಮಹಾಮಂಡಳದ ಖಾತೆಗೆ ಜಮಾ ಮಾಡಲಾಗುತ್ತದೆ. ಸದರಿ ಮೊತ್ತದಲ್ಲಿ ರಾಜ್ಯದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳಲು ಅನುದಾನ ನೀಡುತ್ತಾರೆ. ಇದೇ ಮೊತ್ತದಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಮ್ಯಾನೇಜ್‍ಮೆಂಟ್ ತರಬೇತಿಗಳನ್ನು ಸಹ ನಡೆಸಿ ಕಾಲೇಜು ನಿರ್ವಹಣೆ, ವಿದ್ಯಾರ್ಥಿಗಳಿಗೆ ವಸತಿ ಇತ್ಯಾದಿಗಳನ್ನು ಸಹ ಭರಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ಜಿಲ್ಲೆಯಲ್ಲಿ ಕೂಡ ಸಹಕಾರ ಸಂಘಗಳು ಉತ್ತಮವಾಗಿ ಸಹಕಾರ ನೀಡುತ್ತಾ ಶೇ.100 ರಷ್ಟು ಸಹಕಾರ ಶಿಕ್ಷಣ ನಿಧಿ ಸಂಗ್ರಹಣೆಗೆ ಕೈಜೋಡಿಸುತ್ತಿವೆ. ಪ್ರತಿ ವರ್ಷವು ಸಂಘಗಳ ಲಾಭಾಂಶದಲ್ಲಿ ಏರಿಕೆಯಾಗುತ್ತಿರುವುದನ್ನು ಅವಲೋಕಿಸಿದರೆ ಶಿಕ್ಷಣ, ತರಬೇತಿಯೊಂದಿಗೆ ಸಂಘಗಳ ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮ ಅಭಿವ್ಯಕ್ತವಾಗುತ್ತದೆ. ಸಹಕಾರ ಸಂಘದ ಲಾಭವನ್ನು ಮಾತ್ರ ನಿರೀಕ್ಷಿಸುವ ನಾವು ಇತರ ಸೇವೆಗಳ ಕುರಿತು ಕೃತಜ್ಞರಾಗಿರಬೇಕು. ಈ ನಿಟ್ಟಿನಲ್ಲಿ ಚೆಟ್ಟಳ್ಳಿ ಪ್ಯಾಕ್ಸ್‍ನವರ ಕಾರ್ಯವನ್ನು ಇಲ್ಲಿ ಉದಾಹರಿಸಬಹುದು ಎಂದು ಹೇಳಿದರು. ಸಭಾಭವನ, ಅತಿಥಿ ಗೃಹ, ಗೋದಾಮುಗಳಲ್ಲದೆ, ಕಾಫಿ ಗುಣಮಟ್ಟ ಪರೀಕ್ಷ ಘಟಕ ವಿಶೇಷವಾಗಿ ತಿಥಿ-ಕರ್ಮಾಂತರಗಳಿಗೆ ಉಚಿತ ಸಭಾಂಗಣ, ಸದಸ್ಯರು ಗತಿಸಿದ ಸಂದರ್ಭದಲ್ಲಿ ನೀಡಲಾಗುವ ಉಚಿತ ಶಾಮಿಯಾನ, ಆಸನ ವ್ಯವಸ್ಥೆಗಳು ಅಧ್ಯಕ್ಷರು, ಆಡಳಿತ ಮಂಡಳಿಯವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ಹೀಗೆ ಸಹಕಾರ ಸಂಘಗಳು ಸಾಲ ನೀಡುವುದು ಮಾತ್ರವಲ್ಲದೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಗುಣವಾಗುವಂತೆ ಕೇಂದ್ರ ಸರ್ಕಾರವು ಸಹಕಾರ ಸಂಘಗಳನ್ನು ಬಲಿಷ್ಠವನ್ನಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಸಂಘಗಳು ಅಳವಡಿಸಿಕೊಂಡು ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿ ಜಿಲ್ಲಾ ಸಹಕಾರ ಯೂನಿಯನ್‍ನ ದತ್ತಿ ನಿಧಿಗೆ ಕೊಡುಗೆ ನೀಡಿದ ಕನ್ನಂಡ ಸಂಪತ್, ಚೆಟ್ಟಳ್ಳಿ ಪ್ಯಾಕ್ಸ್‍ನ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪರವರಿಗೆ ವಂದನೆಗಳನ್ನು ಸಲ್ಲಿಸಿದರು.
ಕೊಡಗು ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ಸಹಕಾರ, ಪತ್ರಿಕೋದ್ಯಮ, ವೈದ್ಯಕೀಯ, ರಕ್ಷಣಾ ಕ್ಷೇತ್ರ ಅಂತೆಯೇ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಹೆಸರು ಗಳಿಸಿದೆ. ಆದುದರಿಂದ ಕೊಡಗು ವಿಶ್ವವಿದ್ಯಾನಿಲಯವನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು ಎಂದು ಆಗ್ರಹಿಸಿದರು. ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಹೆಚ್.ಎಸ್. ನಾಗರಾಜಯ್ಯ ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು, ಸಭೆಗಳು, ಆಡಳಿತ ಮಂಡಳಿ ಚುನಾವಣೆ ಇತ್ಯಾದಿ ವಿಷಯದ ಕುರಿತು ಹಾಗೂ ಸೈಬರ್ ಹಾವಳಿ, ತಡೆಗೆ ಕೈಗೊಳ್ಳಬಹುದಾದ ಕ್ರಮಗಳು ವಿಷಯದ ಕುರಿತು ಅಂಕಣಕಾರರು, ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿಮಾರ್ಗದರ್ಶಕರಾದ ಆರ್.ಕೆ.ಬಾಲಚಂದ್ರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರುಗಳಾದ ಎನ್.ಎ.ರವಿ ಬಸಪ್ಪ, ಬಿ.ಎ.ರಮೇಶ್ ಚಂಗಪ್ಪ, ಕೆ.ಎಂ.ತಮ್ಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಪಿ.ವಿ.ಭರತ್, ಪಿ.ಬಿ.ಯತೀಶ್, ಎನ್.ಎ.ರ್ಯಾಲಿ ಮಾದಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾರ್ಥನೆಯನ್ನು ಯೂನಿಯನ್ ವ್ಯವಸ್ಥಾಪಕಿ ಆರ್.ಮಂಜುಳ ನಡೆಸಿದರೆ, ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಡೆಸಿದರು.









