
ಮಡಿಕೇರಿ ಏ.24 NEWS DESK : ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.26 ರಂದು ಮಡಿಕೇರಿಯಲ್ಲಿ ನಮ್ಮ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಉಮ್ಮತ್ ಒನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಬಶೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ ನಗರದ ಮಹದೇವ ಪೇಟೆಯಲ್ಲಿಯಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ನಂತರ 10.30 ಗಂಟೆಗೆ ಕಾವೇರಿ ಹಾಲ್‍ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಕಣಚೂರು ಗ್ರೂಫ್ ಆಫ್ ಇಂಡಸ್ಟ್ರಿಸ್‍ನ ಅಧ್ಯಕ್ಷ ಡಾ.ಯು.ಕೆ.ಮೋನುಹಾಜಿ, ದಕ್ಷಿಣ ಕನ್ನಡ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಭಾರಧಿಯಾರ್ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ರಾಶೀದ್ ಗಝಾಲಿ, ಪುಣೆಯ ಅನಿಶ್ ಡಿಫೆನ್ಸ್ ಕ್ಯಾರಿಯರ್ ಇನ್ಸಿಟ್ಯೂಟ್‍ನ ಸ್ಥಾಪಕ ನಿರ್ದೇಶಕ ಅನಿಸ್ ಕುಟ್ಟಿ, ಬೀದರ್‍ನ ಶಾಹಿದ್ ಗ್ರೂಫ್ ಆಫ್ ಇನ್ಸ್‍ಟ್ಯೂಟ್ ಸಿಇಓ ಡಾ.ತೌಸೀಫ್ ಅಹಮ್ಮದ್, ಶಿಕ್ಷಣ ತಜ್ಞ ಮಂಗಳೂರಿನ ರಫೀಕ್ ಮಾಸ್ಟರ್, ಪುತ್ತೂರು ಕಮ್ಯೂನಿಟಿ ಸೆಂಟರ್ ಸ್ಥಾಪಕ ಹನೀಫ್ ಪುತ್ತೂರು, ಎಂ.ಎಫ್.ಐ.ಎಫ್‍ನ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಪ್ರಮುಖ ರಿಯಾಝ್ ಅಹಮ್ಮದ್ ಕೆ.ಬಿ.. ಎಸ್‍ಎಸ್‍ಐಎಎಸ್ ಅಕಾಡೆಮಿ ನಿರ್ದೇಶಕ ನಝೀರ್ ಅಹಮ್ಮದ್, ಮಸ್ಜಿದ್ ಒನ್ ಮೂಮೆಂಟ್‍ನ ಮೊಹಮ್ಮದ್ ಇಂತಿಯಾಝ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಶಿಕ್ಷಣ, ಉದ್ಯೋಗ ಮತ್ತು ಸಂಶೋಧನೆಯ ಮೂಲಕ ಮುಸ್ಲಿಂ ಸಮಾಜವನ್ನು ಸಬಲೀಕರಣಗೊಳಿಸುವ ನಮ್ಮ ಪ್ರಯಾಣದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದ್ದು, ಇದರ ಮೂಲಕ ಪುಟ್ಟ ಜಿಲ್ಲೆ ಕೊಡಗಿನಲ್ಲೂ ಶೈಕ್ಷಣಿಕ ಕ್ರಾಂತಿಯನ್ನು ಪ್ರಾರಂಭಿಸುವ ಕನಸನ್ನು ನಾವು ಕಾಣುತ್ತಿದ್ದೇವೆ ಎಂದರು. ಸುಮಾರು ಆರು ವರ್ಷಗಳಿಂದ ಜಿಲ್ಲೆಯ ಎಲ್ಲಾ ಸಮುದಾಯದ ಅದರಲ್ಲೂ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಶಿಕ್ಷಣ, ಯುವ ಪೀಳಿಗೆಯ ಉದ್ಯೋಗ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ಉಮ್ಮತ್ ಒನ್ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಯನ್ನು ಕೇಂದ್ರಿಕರಿಸುವ ಉದ್ದೇಶದಿಂದ ಎಲ್ಲರಿಗೂ ಪ್ರಯೋಜನ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಮ್ಯೂನಿಟಿ ರಿಸರ್ಚ್ ಆಂಡ್ ಡೆವಲೆಪ್‍ಮೆಂಟ್ ಸೆಂಟರನ್ನು ಸ್ಥಾಪಿಸಿದೆ ಎಂದು ಎಂ.ಬಿ.ಬಶೀರ್ ಹೇಳಿದರು. ಈ ಕಚೇರಿಯಲ್ಲಿ ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಸಮಾಲೋಚನೆ, ಪ್ರೇರಣದಾಯಕ ತರಗತಿಗಳು, ಉದ್ಯೋಗ ಮೇಳ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಕೌಶಲ್ಯಭಿವೃದ್ಧಿ ತರಬೇತಿ, ವಿವಿಧ ಮಾಹಿತಿ ಕಾರ್ಯಾಗಾರ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಇತರೆ ವಿಷಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಶಿಕ್ಷಣ ಸಂಸ್ಥೆಯೊಂದಿಗೆ ಕೈಜೋಡಿಸಲಾಗುವುದು. ಸಮಾಜದ ಮಾದಕ ವ್ಯಸನ ನಿರ್ಮೂಲನೆ ಮಾಡಲು ಕಾರ್ಯಾಗಾರ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದರು. ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು, ಸಂಶೋಧಕರು, ಉದ್ಯಮಿಗಳು ಹಾಗೂ ಸಮಾಜ ಸೇವಕರು, ಶಾಲಾ-ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ಸಹಕರಿಸುವಂತೆ ಮನವಿ ಮಾಡಿದ ಎಂ.ಬಿ.ಬಶೀರ್, ಈ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸಲು ಸಹಕರಿಸಿದ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಇದೇ ಸಂದರ್ಭ ತಿಳಿಸಿದರು.









