
ಮಡಿಕೇರಿ NEWS DESK ಏ.24 : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯ ಸಾವಿಗೆ ಕಾರಣಕರ್ತರಾದ ಭಯೋತ್ಪಾದಕರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಕೆ.ಎ.ಯಾಕುಬ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಘಟನೆ ಅತೀವ ಬೇಸರವನ್ನುಂಟು ಮಾಡಿದೆ. ಹೇಡಿತನದ ಭಯೋತ್ಪಾದಕರು ನಡೆಸಿರುವ ಹೇಯ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ಉಗ್ರರ ಬೇಟೆಗಾಗಿ ಭಾರತೀಯ ಸೇನೆ ಈಗಾಗಲೇ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ. ಕೇಂದ್ರ ಸರ್ಕಾರ ಕೂಡ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸಬೇಕು. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಜನರು ಕೂಡ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ದೇಶದ ಭದ್ರತೆ ಮತ್ತು ಐಕ್ಯತೆಗಾಗಿ ಎಲ್ಲರೂ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.








