
ಮಡಿಕೇರಿ NEWS DESK ಏ.24 : ಹಿರಿಯ ಕಾಂಗ್ರೆಸ್ ಮುಖಂಡ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅವರು (83) ನಿಧನ ಹೊಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಯಶಿಕಾ, ಪುತ್ರಿಯರಾದ ಕಾವ್ಯ ಹಾಗೂ ಕೃತಿಯನ್ನು ಅಗಲಿದ್ದಾರೆ. ಏ.25ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಿಟ್ಟು ಚಂಗಪ್ಪ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ಮಿಟ್ಟು ಚಂಗಪ್ಪ ಅವರು ಕಳೆದ 5 ದಶಕಗಳಿಂದ ರಾಜಕೀಯದಲ್ಲಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸಚಿವ ದಿನೇಶ್ ಗುಂಡೂರಾವ್, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಮುಖರು ಮತ್ತಿತರರು ಸಂತಾಪ ಸೂಚಿಸಿದ್ದಾರೆ. 32 ಚುನಾವಣೆಗಳಲ್ಲಿಯೂ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿ ಮತದಾನ ಜಾಗೃತಿಯ ರಾಯಭಾರಿಯಂತೆ ಗಮನಸೆಳೆದಿದ್ದ ಮಿಟ್ಟುಚಂಗಪ್ಪ ಅವರು ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೃಷಿಕರಾಗಿ, ಕಾಫಿ ಉದ್ಯಮಿಯಾಗಿ ವಿಶೇಷ ವ್ಯಕ್ತಿತ್ವ ಹೊಂದಿದ್ದರು.








