
ಮಡಿಕೇರಿ NEWS DESK ಏ.25 : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿ ಅಮಾನವೀಯ ಕೃತ್ಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಮಾಯಕ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ದು:ಖದ ವಿಚಾರವಾಗಿದೆ. ಕೇಂದ್ರ ಸರ್ಕಾರ ವಿಳಂಬ ಮಾಡದೆ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಭಯೋತ್ಪಾದಕರ ದಾಳಿ ನಿಯಂತ್ರಣದಲ್ಲಿದೆ ಎಂದು ಎನ್‌ಡಿಎ ನೇತೃತ್ವದ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಪಹಲ್ಗಾಮ್ ನಂತಹ ಭೀಕರ ದಾಳಿ ಮರುಕಳಿಸುತ್ತಲೇ ಇದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ, ಅಲ್ಲದೆ ಗುಪ್ತಚರ ಇಲಾಖೆ ಕೂಡ ತನ್ನ ಕಾರ್ಯದಕ್ಷತೆಯಲ್ಲಿ ಎಡವಿದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಕೇವಲ ಜನರನ್ನು ಮೆಚ್ಚಿಸಲು ಘೋಷಣೆ ಮತ್ತು ಭರವಸೆಗಳನ್ನು ನೀಡುವ ಬದಲು ಇನ್ನು ಮುಂದಾದರು ಎಚ್ಚೆತ್ತುಕೊಂಡು ದೇಶದ ಪ್ರಜೆಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ನೋಡಿಕೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ದೇಶವ್ಯಾಪಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಭಾರತೀಯರೆಲ್ಲರು ಒಗ್ಗಟ್ಟಾಗಿ ದೇಶದ್ರೋಹಿ ಚಟುವಟಿಕೆಗಳ ವಿರುದ್ಧ ಹೋರಾಡಬೇಕು. ಭಯೋತ್ಪಾದಕರ ದಮನಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಹೆಚ್.ಬಿ.ಪೃಥ್ವಿ ತಿಳಿಸಿದ್ದಾರೆ.








