
ಮಡಿಕೇರಿ ಏ.25 NEWS DESK : ಮಹಿಳೆಯರು ಸ್ವ ಉದ್ಯೋಗದಿಂದ ಪ್ರಗತಿ ಗೊಂಡರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಹಿಳಾ ಕೃಷಿಕರು, ಬರಹಗಾರ್ತಿ ಸಹನಾ ಕಾಂತಬೈಲು ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಮಾಜ ಕಾರ್ಯ ವಿಭಾಗ ವತಿಯಿಂದ ರತ್ನ ಶ್ರೀ ಜ್ಞಾನ ವಿಕಾಸ ಕೇಂದ್ರ ಕೊಯನಾಡು ಸಹಭಾಗಿತ್ವದಲ್ಲಿ ಕೊಯನಾಡು ಶ್ರೀ ಗಣೇಶ್ ಕಲಾ ಮಂದಿರದಲ್ಲಿ ನಡೆದ ಮಹಿಳಾ ಸಬಲೀಕರಣ ಮತ್ತು ನೀರಿನ ಸಂರಕ್ಷಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು, ಮಾತನಾಡಿದರು. ಮನೆಯಲ್ಲಿಯೇ ಕೋಳಿ ಸಾಕಾಣಿಕೆ, ಹಪ್ಪಳ ಸಂಡಿಗೆ ಇತ್ಯಾದಿ ತಯಾರಿಸಿ ಮಾರಾಟ ಮಾಡುವುದರಿಂದ ಮಹಿಳೆಯರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯ ಎಂದರು. ನೀರಿನ ಮಿತ ಬಳಕೆಯಿಂದಲೂ ಜಲ ಸಂಪತ್ತನ್ನು ಉಳಿಸಲು ಸಾಧ್ಯ ಹಾಗೂ ಯಾವೆಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಬಲರಾಗಬಹುದು ಎಂಬುದನ್ನು ವಿವರಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಮಧುಕರ್ ಮಾತನಾಡಿ, ಸಮಾಜ ಕಾರ್ಯ ಶಿಕ್ಷಣ ಇದೊಂದು ವೃತ್ತಿ ಬದುಕಿನ ಅವಕಾಶವಾಗಿದೆ. ಸಮಾಜ ಕಾರ್ಯ ಶಿಕ್ಷಣ ಪಡೆದವರು ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ಆಪ್ತ ಸಮಾಲೋಚನ ಕೇಂದ್ರಗಳಲ್ಲಿ, ಶಾಲೆಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ಸಂಯೋಜಕರಾಗಿ ಅಥವಾ ಯೋಜನಾಧಿಕಾರಿಗಳಾಗಿಯೂ ಉದ್ಯೋಗವಕಾಶಕ್ಕೆ ಆದ್ಯತೆ ನೀಡುತ್ತಾರೆ. ಮಾನಸಿಕ ತೊಂದರೆಗಳಿಗೆ ಒಳಗಾದವರಿಗೆ ಗ್ರಾಮೀಣ ಜನರಿಗೆ ಕೊಳಚೆ ಪ್ರದೇಶಗಳ ವಾಸಿಗಳಿಗೆ ಸಹಾಯ ಮಾಡಬಲ್ಲ ವಿವಿಧ ಅವಕಾಶಗಳ ನೀಡುವ ಈ ಶಿಕ್ಷಣದ ಮೂಲಕ ಉದ್ಯೋಗ ಪಡೆಯುವವರಿಗೆ ಆರ್ಥಿಕವಾಗಿಯೂ ಒಳ್ಳೆಯ ವೇತನವನ್ನು ದೊರೆಯುತ್ತದೆ. ದೇಶವಿದೇಶಗಳಲ್ಲಿಯೂ ಉದ್ಯೋಗಕ್ಕೆ ಅವಕಾಶವಿರುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮವನ್ನು ರತ್ನಶ್ರೀ ಜ್ಞಾನ ವಿಕಾಸ ಯೋಜನಾಧಿಕಾರಿ ಪುರುಷೋತ್ತಮ ಉದ್ಘಾಟಿಸಿದರು. ರತ್ನಶ್ರೀ ಒಕ್ಕೂಟದ ಅಧ್ಯಕ್ಷ ಮೀನಾಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರತ್ನಶ್ರೀ ಜ್ಞಾನ ವಿಕಾಸ ಕೇಂದ್ರ ಕೊಯನಾಡು ಸಂಘದ ಸದಸ್ಯರು, ತಾಲೂಕು ಹಾಗೂ ವಲಯ ಮುಖ್ಯಸ್ಥರು, ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಶರತ್, ದಿಕ್ಷೀತಾ, ಸಹನಾ, ತುಳಸಿ, ಪೂರ್ವಿಕ ಹಾಜರಿದ್ದರು. ಸಮಾಜ ಕಾರ್ಯ ವಿಧ್ಯಾರ್ಥಿನಿ ಪ್ರಾರ್ಥನೆ ನೆರವೇರಿಸಿದರು, ಸಮಾಜ ಕಾರ್ಯ ವಿಧ್ಯಾರ್ಥಿ ಪ್ರಜಿತ್ ಸ್ವಾಗತಿಸಿದರು, ರುನೈಝ್ ಕಾರ್ಯಕ್ರಮ ನಿರೂಪಿಸಿದರು, ರತ್ನಶ್ರೀ ಜ್ಞಾನ ವಿಕಾಸ ಸಂಯೋಜಕಿ ಕುಮಾರಿ ಮಾಲಿನಿ ವಂದಿಸಿದರು.









