
ಮಡಿಕೇರಿ ಏ.28 NEWS DESK : ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಮಾಂದಲ್‍ಪಟ್ಟಿಗೆ ಚಾರಣವನ್ನು ಆಯೋಜಿಸಲಾಗಿತ್ತು. ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕುಂಜಿಲ ಗ್ರಾಮದ ಕೋಟೇರ ಎನ್.ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾರಣದಲ್ಲಿ ಶಿಬಿರಾರ್ಥಿ ಪುಟಾಣಿಗಳು, ಪೋಷಕರು, ಶಿಕ್ಷಕರು ಹಾಗೂ ಆಯೋಜಕರು ಸೇರಿದಂತೆ 150ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಹಸಿರ ಪರಿಸರದಲ್ಲಿ ಸಂತೋಷದಿಂದ ಭಾಗಿಯಾಗಿ ಉತ್ತಮ ಅನುಭವ ಪಡೆದುಕೊಂಡರು. ಕಾಲೂರಿನಿಂದ ಮಾಂದಲ್‍ಪಟ್ಟಿ ವರೆಗೆ ಕಾಲ್ನಡಿಗೆಯಲ್ಲೇ ತಲುಪಿ ಸಂಭ್ರಮಿಸಿದ ವಿದ್ಯಾರ್ಥಿಗಳು ನಂತರ ಹಟ್ಟಿಹೊಳೆಯ ಆವಂಡಿ ಜಲಪಾತಕ್ಕೆ ತೆರಳಿ ಪ್ರಕೃತಿ ಸೌಂದರ್ಯದ ನಡುವೆ ನೀರಿನಲ್ಲಿ ಮಿಂದೆದ್ದರು. 20 ಕಿ.ಮೀ ದೂರದ ಚಾರಣದಲ್ಲಿ ಎಲ್‍ಕೆಜಿಯಿಂದ 16 ವರ್ಷದ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದ ಸಂಘಟಕರಾದ ಬಾಬು ಸೋಮಯ್ಯ, ಶ್ಯಾಮ್ ಪೂಣಚ್ಚ, ಕುಡೆಕಲ್ ಸಂತೋಷ್, ಮಹೇಶ್ ಕುಮಾರ್, ವೆಂಕಟೇಶ್, ಲೋಕೇಶ್ ನಾಯ್ಡು ಮತ್ತಿತರರು ಹಾಜರಿದ್ದರು. ಶಿಬಿರಾರ್ಥಿಗಳಿಗೆ ಪ್ರತಿ ದಿನ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತಮ ಹಾಗೂ ನುರಿತ ತರಬೇತುದಾರರಿಂದ ಯೋಗ, ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್, ಡ್ರಾಯಿಂಗ್ ಮತ್ತು ಪೇಯಿಟಿಂಗ್ ತರಬೇತಿ ನೀಡಲಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಈ ರೀತಿಯ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಂತೆ ಕೋಟೇರ ಎನ್.ಮುದ್ದಯ್ಯ ಮನವಿ ಮಾಡಿದರು.
*ಮೇ 1 ರಂದು ಸಮಾರೋಪ* ಮಾ.25 ರಿಂದ ಆರಂಭಗೊಂಡ ಶಿಬಿರದ ಸಮಾರೋಪ ಸಮಾರಂಭ ಮೇ 1 ರಂದು ಬೆಳಿಗ್ಗೆ 8.30 ಗಂಟೆಗೆ ನಡೆಯಲಿದ್ದು, ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.









