
ಮಡಿಕೇರಿ ಏ.28 NEWS DESK : ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು, ಮುಟ್ಲು, ಹಮ್ಮಿಯಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಕಾಡುತ್ತಿದ್ದು, ನಿತ್ಯ ಕೆಲಸ, ಕಾರ್ಯಗಳಿಗೆ ಅಡಚಣೆಯಾಗಿದೆ. ತಕ್ಷಣ ಅಧಿಕಾರಿಗಳು ನೆಟ್‍ವರ್ಕ್ ಸಮಸ್ಯೆಗೆ ಸ್ಪಂದಿಸದೆ ಇದ್ದಲ್ಲಿ ಬಿಎಸ್‍ಎನ್‍ಎಲ್ ಕಚೇರಿಗೆ ಮುತ್ತಿಗೆ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಹೀನಾಯ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು, ಯುವ ಪೀಳಿಗೆ, ಉದ್ಯೋಗಸ್ಥರು ಹಾಗೂ ಸರ್ಕಾರಿ ಕಚೇರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಕರೆಗಳು ದೊರೆಯದೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕ ಸೇವೆಗೆ ಅಡಚಣೆಯಾಗಿದೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕ್ಷೀಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಒಂದು ತಿಂಗಳು ಕಳೆದರೆ ಮಳೆಗಾಲವೂ ಆರಂಭವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಸಂಭವಿಸುವಾಗ ಅಥವಾ ಸಂಕಷ್ಟದ ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಅಗತ್ಯವಾಗಿ ಬೇಕಾಗಿದೆ. ವನ್ಯಜೀವಿಗಳು ದಾಳಿ ಮಾಡಿದಾಗಲೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ, ಬಿಎಸ್‍ಎನ್‍ಎಲ್ ಅಧಿಕಾರಿಗಳು ಗ್ರಾಮೀಣ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈ ಹಿಂದೆ ಇದ್ದ ನೆಟ್‍ವರ್ಕ್ ಇತ್ತೀಚಿನ ದಿನಗಳಲ್ಲಿ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಮುಂದಿನ 10 ದಿನಗಳೊಳಗೆ ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ಸೂಚಿಸದಿದ್ದಲ್ಲಿ ಗ್ರಾಮಸ್ಥರೆಲ್ಲರು ಒಗ್ಗೂಡಿ ಬಿಎಸ್‍ಎನ್‍ಎಲ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಮನು ಮುದ್ದಪ್ಪ ಎಚ್ಚರಿಕೆ ನೀಡಿದ್ದಾರೆ.









