
ಸೋಮವಾರಪೇಟೆ ಏ.28 NEWS DESK : ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆ ಇನ್ಸ್‍ಪೆಕ್ಟರ್ ಮುದ್ದುಮಾದೇವ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಠಾಣೆಯಲ್ಲಿ ನಡೆಯಿತು. ಕಳೆದ ತಿಂಗಳ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಕಳ್ಳಬಟ್ಟಿ ಸಾರಾಯಿ ತಯಾರಿಕೆಯ ಬಗ್ಗೆ ಚರ್ಚೆ ನಡೆದಿತ್ತು. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆ ನಡೆಸಲಾಯಿತು. 8 ಲೀಟರ್ ಬಟ್ಟಿ ಸರಾಯಿ, ಒಂದು ಬ್ಯಾರಲ್ ಪುಳಿಗಂಜಿ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಇನ್ಸ್‍ಪೆಕ್ಟರ್ ತಿಳಿಸಿದರು. ಸಭೆಯಲ್ಲಿ ರಾಜಪ್ಪ ಮಾತನಾಡಿ, ಅಬ್ಬಿಮಠ ಗ್ರಾಮದ ಬಸ್ ನಿಲ್ದಾಣ ಮತ್ತು ಯಡೂರು ಬಸ್ ನಿಲ್ದಾಣದಲ್ಲಿ ಬಿಡಿ ಸಿಗರೇಟು ಮತ್ತು ಮದ್ಯದ ಬಾಟಲ್‍ಗಳು ತುಂಬಿವೆ. ಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಕೆಲ ಸಂದರ್ಭ ಪುಂಡರ ಹಾವಳಿಯೂ ಜಾಸ್ತಿಯಾಗಿದೆ. ಪೊಲೀಸರು ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು. ದಲಿತಪರ ಹೋರಾಟಗಾರ ಎಸ್.ಎ.ಪ್ರತಾಪ್ ಮಾತನಾಡಿ, ನಗರದಲ್ಲಿ ಪಾಕಿರ್ಂಗ್ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಸಂತೆ ದಿನ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ ಈ ಬಗ್ಗೆ ಪೊಲೀಸರು ಕ್ರಮತೆಗೆದುಕೊಳ್ಳಬೇಕು ಎಂದು ಹೇಳಿದರು. ಸಭೆಯಲ್ಲಿ ಯೋಗೇಶ್. ಹೂವಯ್ಯ. ಪಿ.ಕೆ.ವಸಂತ ಇದ್ದರು.









