
ಮಡಿಕೇರಿ NEWS DESK ಏ.29 : “ಲಕ್ಕಡಿಕೋಟೆ”ಯಲ್ಲಿ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ವೀರ ಕೊಡವ ಯೋಧರ ಸಂಸ್ಮರಣೆ ಕಾರ್ಯಕ್ರಮ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 18 ನೇ ಶತಮಾನದಲ್ಲಿ ಕೊಡವ ಯೋಧರು ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ಅಮೂಲ್ಯವಾದ ಪುರಾತತ್ವ ತಾಣ ಮೂರ್ಕಲ್‌ನಲ್ಲಿರುವ “ಲಕ್ಕಡಿಕೋಟೆ”ಯಲ್ಲಿ ಗೌರವಾಂಜಲಿ ಅರ್ಪಿಸಿರುವುದಾಗಿ ತಿಳಿಸಿದರು. ತಾಯ್ನಾಡನ್ನು ರಕ್ಷಿಸುವಲ್ಲಿ ಕೊಡವ ಯೋಧರ ಶೌರ್ಯ, ಸರ್ವೋಚ್ಚ ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಗಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಯೋಧ ಕುಲವಾಗಿದ್ದು, ಸಮರ ಮನೋಭಾವಕ್ಕೆ ಕೊಡವರು ಖ್ಯಾತರಾಗಿದ್ದಾರೆ. ಆಂಗ್ಲೋ-ಮೈಸೂರು ಯುದ್ಧದ ಮತ್ತೊಂದು ಮಹತ್ವದ ಸ್ಥಳವಾದ ನಾಣಚ್ಚಿ-ಕುಟ್ಟಾ ಬಳಿಯ ಪಾಲ್ತೋಪ್-ಪಾಲ್ತೋಡ್ ಸ್ಥಳದಲ್ಲಿ ಕೂಡ ಸಿಎನ್‌ಸಿ ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿದೆ ಎಂದು ಎನ್.ಯು.ನಾಚಪ್ಪ ಹೇಳಿದರು.
ಲಕ್ಕಡಿಕೋಟೆ ಹಾಗೂ ಪಾಲ್ತೋಪ್-ಪಾಲ್ತೋಡ್ ಎರಡರಲ್ಲೂ ಸಿಎನ್‌ಸಿಯ ಶ್ರದ್ಧಾಂಜಲಿ ಆಚರಣೆಗಳು ಸಮುದಾಯದ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು. ಕೊಡವರ ರಕ್ಷಣೆಗಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು, ಅಂತರರಾಷ್ಟ್ರೀಯದಲ್ಲಿ ಸಮಾವೇಶದಡಿಯಲ್ಲಿ ಕೊಡವ ಸಮುದಾಯವನ್ನು ಆದಿಮಸಂಜಾತ ಜನರು ಎಂದು ಗುರುತಿಸಬೇಕು, ಸಿಕ್ಕಿಂನ ಬೌದ್ಧ ಬಿಕ್ಷುಗಳಿಗಾಗಿ “ಸಂಘ” ಮತ ಕ್ಷೇತ್ರವನ್ನು ಮೀಸಲಿಟ್ಟಂತೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವ ಸಮುದಾಯಕ್ಕೆ ಕೂಡ ವಿಶೇಷ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಇದೇ ಸಂದರ್ಭ ಎನ್.ಯು.ನಾಚಪ್ಪ ಅವರು ಹಕ್ಕೊತ್ತಾಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಮ್ಮಡ ಮೋಹನ್, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಮದ್ರಿರ ಕರುಂಬಯ್ಯ, ಕಿರಿಯಮಾಡ ಶೆರಿನ್, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಬೊಳ್ಳೇರ ದೀಪಕ್ ಪಾಲ್ಗೊಂಡಿದ್ದರು.








