
ಮಡಿಕೇರಿ ಏ.30 NEWS DESK : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಫಾಕ್ ಪ್ರಚೋದಿತ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸಿ, ಇದಕ್ಕೆ ದಿಟ್ಟ ಉತ್ತರವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೇ1 ರಂದು ಸಂಜೆ ವಿವಿಧ ಸಂಘಟನೆಗಳಿಂದ ನಗರದಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್, ನ್ಯಾಷನಲ್ ಮೆಡಿಕೋಸ್ ಅಸೊಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ನೀಮಾ ಸೇರಿದಂತೆ ವಿವಿಧ ಸಂಘಟನೆಗಳು ಒಗ್ಗೂಡಿ ಮೆರವಣಿಗೆಯನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಜಾತಿ, ಮತ, ಧರ್ಮಗಳನ್ನು ಮೀರಿ ನಾವೆಲ್ಲರೂ ಭಾರತೀಯರು ಎನ್ನುವ ಒಂದೇ ಘೋಷವಾಕ್ಯದೊಂದಿಗೆ ಸಂಜೆ 6 ಗಂಟೆಗೆ ನಗರದ ಇಂದಿರಾಗಾಂಧಿ ವೃತ್ತದಿಂದ ಕ್ಯಾಂಡಲ್ ಲೈಟ್ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆ ನಗರದ ಮುಖ್ಯ ಬೀದಿಗಳಿಗಾಗಿ ಹಾದು, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಮಾನವ ಸರಪಳಿಯನ್ನು ರಚಿಸಿ ಭಯೋತ್ಪಾದನೆಯ ವಿರುದ್ಧ ನಾವೆಲ್ಲರು ಸಂಘಟಿತರಾಗಿದ್ದೇವೆ ಎನ್ನುವುದನ್ನು ಸಾರಲಾಗುತ್ತದೆ ಎಂದು ಹೇಳಿದರು. ಪಾಕಿಸ್ತಾನಿ ಪ್ರಚೋದಿತ ಭಯೋತ್ಪಾದಕತೆಯನ್ನು ಪ್ರತಿಯೊಬ್ಬರು ಖಂಡಿಸಬೇಕಾಗಿದೆ. ಏಳೆಂಟು ಕೋಟಿ ಜನಸಂಖ್ಯೆ ಇರುವ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಲೆ ಬರುತ್ತಿದೆ. ಇದೀಗ ಪೆಹೆಲ್ಗಾಂ ಘಟನೆಯ ಬಳಿಕ 150 ಕೋಟಿ ಜನಸಂಖ್ಯೆಯುಳ್ಳ ಭಾರತಕ್ಕೆ ತನ್ನ ಶಕ್ತಿ ಪ್ರದರ್ಶನಕ್ಕೆ ಕಾಲ ಕೂಡಿ ಬಂದಿದ್ದು, ಭಯೋತ್ಪಾದಕತೆಗೆ ಕೊನೆ ಹಾಡಬೇಕಾಗಿದೆಯೆಂದು ದೃಢವಾಗಿ ನುಡಿದರು. ಅಮಾಯಕರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರಿಗೆಂದಿಗೂ ದಯೆ ತೋರಲಾಗದು. ಕೇಂದ್ರ ಸರ್ಕಾರ ತಕ್ಷಣ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೆ.ಎಂ.ಬಿ.ಗಣೇಶ್ ಆಗ್ರಹಿಸಿದರು. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮಾ)ನ ಕೊಡಗು ಘಟಕದ ಅಧ್ಯಕ್ಷ ಡಾ.ರಾಜಾರಾಂ ಮಾತನಾಡಿ, ಕ್ಯಾಂಡಲ್ ಲೈಟ್ ಮೆರವಣಿಗೆಯಲ್ಲಿ 13 ಕ್ಕೂ ಹೆಚ್ಚಿನ ಸಂಘಟನೆಗಳು ಕೈ ಜೋಡಿಸುತ್ತಿವೆ ಮತ್ತು ವಿವಿಧ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಪೆಹಲ್ಗಾಂ ಭಯೋತ್ಪಾದಕ ದಾಳಿಯನ್ನು ಜಾತಿ, ಮತ ಧರ್ಮ, ಪಕ್ಷಗಳನ್ನು ಮೀರಿ ಪ್ರತಿಯೊಬ್ಬರು ಸಂಘಟಿತರಾಗಿ ವಿರೋಧಿಸುವ ಅಗತ್ಯವಿರುವುದಾಗಿ ಸ್ಪಷ್ಟಪಡಿಸಿದರು. ನ್ಯಾಷನಲ್ ಮೆಡಿಕೋ ಆರ್ಗನೈಸೇಷನ್(ಎನ್‍ಎಂಒ)ನ ಯುವ ಘಟಕದ ಪ್ರಮುಖರಾದ ವಿಕ್ರಂ ಶೆಟ್ಟಿ ಮಾತನಾಡಿ, ಯುವ ಸಮೂಹ ಭಯೋತ್ಪಾದಕ ದಾಳಿಯ ಸಂದರ್ಭ ತಮ್ಮ ಮೊಬೈಲ್‍ಗಳಲ್ಲಿ ಸ್ಟೇಟಸ್ ಹಾಕಿಕೊಂಡು ಘಟನೆಯನ್ನು ವಿರೋಧಿಸಿದರಷ್ಟೆ ಸಾಲದು, ರಸ್ತೆಗಿಳಿದು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ವಾಸ್ತವವನ್ನು ಅರಿತುಕೊಳ್ಳುವ ಅಗತ್ಯವಿರುವುದಾಗಿ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಶ್ರೀಮುತ್ತಪ್ಪ ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ವಿ.ಉಣ್ಣಿ ಕೃಷ್ಣನ್, ಶ್ರೀಕೋದಂಡ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಹಾಗೂ ಸಂಸ್ಕೃತಿ ಸಿರಿ ಬಳಗದ ಯೋಗೇಶ್ ಬಿ.ವಿ. ಉಪಸ್ಥಿತರಿದ್ದರು.









