
ಮಡಿಕೇರಿ NEWS DESK ಮೇ 1 : ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂದರ್ಭ ಮಲಯಾಳಿ ಸಮಾಜಕ್ಕೆ ಸೇರಿದ ಸದಸ್ಯರಾದ ಕೆ.ಎಸ್.ರಮೇಶ್ ಹಾಗೂ ಉಷಾ ಕಾವೇರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ, ಇದು ಮಲಯಾಳಿ ಸಮುದಾಯಕ್ಕೆ ಅತೀವ ನೋವನ್ನುಂಟು ಮಾಡಿದೆ ಎಂದು ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಮಲಯಾಳಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಕ್ಷದ ಕೆಲವು ನಾಯಕರ ಉದ್ಧಟತನದಿಂದ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಮಲಯಾಳಿ ಸಂಘದ ಮಡಿಕೇರಿಯ ಹಾಗೂ ಜಿಲ್ಲಾ ಘಟಕದ ಸ್ಥಾಪಕ ಅಧ್ಯಕ್ಷರಾಗಿರುವ ಕೆ.ಎಸ್.ರಮೇಶ್ ಅವರು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡು, ನಗರಸಭೆ ಸದಸ್ಯರಾಗಿ ಸತತ 4 ಬಾರಿ ಆಯ್ಕೆಯಾಗಿದ್ದಾರೆ. ಇಷ್ಟು ಜನಮನ್ನಣೆ ಹೊಂದಿರುವ ನಾಯಕನ ವಿರುದ್ಧ ಈ ರೀತಿಯ ಕುತಂತ್ರ ನಡೆಯುತ್ತಿರುವುದು ಖಂಡನೀಯ.
ಯಾರಾದರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬAದಲ್ಲಿ ಬಿಜೆಪಿ ವರಿಷ್ಠರು ತಕ್ಷಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಯಾವುದಾದರು ಹುದ್ದೆ ಕೇಳುವ ಸಂದರ್ಭ ಮಾತ್ರ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಕಾರ್ಯ ಪಕ್ಷದ ಕೆಲವು ನಾಯಕರಿಂದ ನಡೆಯುತ್ತಿದೆ. ಪಕ್ಷದಲ್ಲಿ ಜಾತಿಯ ಭೇದಭಾವ ಇಲ್ಲ ಎಂದು ಹಿರಿಯ ನಾಯಕರು ಹೇಳಿದರೂ ಹುದ್ದೆ ವಿಚಾರ ಬರುವಾಗ ಜಾತಿ ಮುನ್ನೆಲೆಗೆ ಬರುವುದು ವಿಷಾದಕರ. ತಪ್ಪಾದಾಗ ಖಂಡಿಸದೆ ಅಧಿಕಾರದ ವಿಚಾರ ಬಂದಾಗ ಮಾತ್ರ ಉಡಾಫೆಯ ಉತ್ತರ ನೀಡಲಾಗುತ್ತಿದೆ. ಆರೋಪ ಗೊತ್ತಿದೆ ಎಂದ ಮೇಲೆ ನಗರಸಭೆಯ ಆಯ್ಕೆಗೆ ಬಿಜೆಪಿಯ ಚುನಾಯಿತ ಜನಪ್ರತಿನಿಧಿಗಳ ನಡುವೆ ಆಂತರಿಕ ಮತದಾನ ನಡೆಸುವ ಅಗತ್ಯವೇನಿತ್ತು, ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೀಡುವುದಿಲ್ಲವೆಂದು ನೇರವಾಗಿ ಹೇಳಬಹುದಿತ್ತು. ರಾಜ್ಯ ನಾಯಕರ ಸಮ್ಮುಖದಲ್ಲಿ ಆಂತರಿಕ ಮತದಾನ ಮಾಡಿ ನಾಟಕವಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಮಲಯಾಳಿ ಸಮುದಾಯ ಎನ್ನುವ ಒಂದೇ ಕಾರಣಕ್ಕೆ ಹುದ್ದೆ ನೀಡಲು ಹಿಂದೇಟು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಮಲಯಾಳಿ ಸಮುದಾಯ ಬಾಂಧವರು ಪಕ್ಷಾತೀತವಾಗಿ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಪಕ್ಷಾತೀತವಾಗಿ ಈ ರೀತಿಯ ಬೆಳವಣಿಗೆಯನ್ನು ಸಮಾಜ ಬಾಂಧವರು ಖಂಡಿಸಬೇಕು. ಮಲಯಾಳಿ ಸಮುದಾಯದವರು ಕೇವಲ ಮತಬ್ಯಾಂಕ್ ಗಾಗಿ ಮಾತ್ರ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುಮಾರು 45 ಸಾವಿರದಷ್ಟು ಇರುವ ಮಲೆಯಾಳಿ ಸಮುದಾಯದ ಮತ ಬೇಡವೆಂದು ಬಿಜೆಪಿ ಜಿಲ್ಲಾಧ್ಯಕ್ಷರು ಬಹಿರಂಗ ಹೇಳಿಕೆ ನೀಡಲಿ ಎಂದು ಸವಾಲು ಹಾಕಿರುವ ಅವರು, ಮಲಯಾಳಿ ಸಮುದಾಯದ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರವನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.











