
ನಾಪೋಕ್ಲು ಮೇ 3 NEWS DESK : ಶಿಬಿರಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಪರಿಣತಿಯನ್ನು ಹೊಂದಿ ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಮುಖ್ಯ ಅತಿಥಿ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು. ನಾಪೋಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿ, ಬಳಿಕ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ಹಾಕಿ ಕ್ರೀಡೆ ಪ್ರಸಿದ್ಧಿ ಹೊಂದಿದೆ. ಜಿಲ್ಲೆಯಲ್ಲೂ ಇರುವ ಉತ್ತಮ ಹಾಕಿಪಟುಗಳಿಂದಾಗಿ ಕೌಟುಂಬಿಕ ಹಾಕಿ ಉತ್ಸವ ಗಿನ್ನೆಸ್ ಬುಕ್‍ಆಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಪಡೆಯುವಂತಾಗಿದೆ. ಹಾಕಿ ಕ್ರೀಡೆಗೆ ಉತ್ತಮ ಅವಕಾಶಗಳು ಇರುವುದರಿಂದ ಶಿಬಿರಾರ್ಥಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಉತ್ತಮವಾಗಿ ತರಬೇತಿ ಆಯೋಜಿಸುತ್ತಿರುವ ಅಕಾಡೆಮಿಯ ಮುಂದಿನ ವರ್ಷದ ತರಬೇತಿ ಶಿಬಿರಕ್ಕೆ ರೂ.50,000 ಗಳ ಕೊಡುಗೆ ನೀಡುವುದಾಗಿ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾನಿಗಳಾದ ಪಾಂಡಂಡ ಲೀಲಾ ಕುಟ್ಟಪ್ಪ, ವಿದ್ಯಾರ್ಥಿಗಳು ತಂದೆ-ತಾಯಿಯಂದಿರಿಗೆ ಗೌರವವನ್ನು ನೀಡಬೇಕು. ಉತ್ತಮ ಶಿಕ್ಷಣವನ್ನು ಪಡೆಯಬೇಕು. ಕೇವಲ ಕ್ರೀಡೆಗೆ ಮಹತ್ವ ನೀಡದೆ ಶಿಕ್ಷಣಕ್ಕೂ ಮಹತ್ವ ನೀಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಇರುವಂತಾಗಬೇಕು ಎಂದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಕಾಂಡಂಡ ಜೋಯಪ್ಪ, ಮಾದಕ ದ್ರವ್ಯ ಸೇವನೆಯಿಂದ ದೂರವಿರಬೇಕು. ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಮಾಡಬಾರದು. ಮೊಬೈಲ್ ಫೋನ್ ಅಗತ್ಯಕ್ಕೆ ಮಾತ್ರ ಬಳಕೆ ಮಾಡಿ ಎಂದು ಕಿವಿ ಮಾತು ಹೇಳಿದರು. ಉಪಾಧ್ಯಕ್ಷ ನಿವೃತ ಸೇನಾನಿ, ಕೊಂಡೀರ ನಾಣಯ್ಯ, ಕುಲ್ಲೇಟಿರ ಅರುಣ್ ಬೇಬಾ, ಬಿದ್ದಾಟಂಡ ಸುಮನ್ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 25 ವರ್ಷಗಳಿಂದ ನಿರಂತರವಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಿರುವುದರಿಂದ ನಾಲ್ಕುನಾಡು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದರು. ಪೋಷಕರಾದ ನೆರವಂಡ ಅನಿಲ್ ಮತ್ತು ಕೆಲೇಟಿರ, ಡಾಕ್ಟರ್ ಬೋಪಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿ ದುಂದುಭಿ ವರದಿ ವಾಚಿಸಿ, ಮಾತನಾಡಿ ಶಿಬಿರ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಸಮಾರಂಭಕ್ಕೂ ಮುನ್ನ ಶಿಬಿರಾರ್ಥಿಗಳು ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ಸಲ್ಲಿಸಿ ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿ.ಕಲಿಯಂಡ ಸಾಬು ಅಯ್ಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ಶಿರಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಅರ್ಹತಾ ಪತ್ರವನ್ನು ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಮಹಿಳಾ ಸಮಾಜದ ಅಧ್ಯಕ್ಷ ಕುಂಚೇಟ್ಟಿರ ರೇಷ್ಮಾ ಉತ್ತಪ್ಪ, ಸುಧಿ ಉತ್ತಪ್ಪ, ಕೆಪಿಎಸ್ ಶಾಲೆಯ ಪ್ರಾಂಶುಪಾಲೆ ಮೇದುರ ವಿಶಾಲ್, ಕನ್ನಂಬೀರ ಸುಧಿ ತಿಮ್ಮಯ್ಯ, ಶಿವಚಳಿಯಂಡ ಅಂಬಿ ಕಾರ್ಯಪ್ಪ, ಮುಂಡಂಡ ಕವಿತಾ ಅಯ್ಯಣ್ಣ, ಕಲಿಯಂಡ ಆಶಿಕ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಖಜಾಂಚಿ, ತರಬೇತುದಾರ ಮಾಜಿ ಸೈನಿಕ ಕೇಟೋಳಿರ ಡಾಲಿ ಅಚ್ಚಪ್ಪ, ಕಾರ್ಯದರ್ಶಿ ಮಾಚೆಟ್ಟಿರ ಕುಸು ಕುಶಾಲಪ್ಪ, ನಿರ್ದೆಶಕರಾದ ಮುಕ್ಕಾಟಿರ ವಿನಯ್, ದುಗ್ಗಳ ಸದಾನಂದ, ತರಬೇತುದಾರರಾದ ಅರೆಯಡ ಗಣೇಶ್, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಬಿದ್ದಾಟಂಡ ಮಮತ ಚಿಣ್ಣಪ್ಪ, ಕುಂಡಿಯೋಳಂಡ ಕವಿತಾ ಮುತ್ತಣ್ಣ ಹಾಗೂ ಪೋಷಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









