
ಸುಂಟಿಕೊಪ್ಪ ಮೇ 13 NEWS DESK : ಜೀವನವನ್ನು ಕ್ರೀಡಾಸ್ಫೂರ್ತಿ ಯಿಂದ ತೆಗೆದುಕೊಂಡಾಗ ಈ ಜೀವನದ ಗೆಲುವು ಮತ್ತು ಸಾಧನೆ ನಮ್ಮದಾಗುತ್ತದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸಂತ ಅಂತೋಣಿಯವರ ಚರ್ಚ್ ಸಂಯುಕ್ತಾಶ್ರಯದಲ್ಲಿ ಆಯೋಜಿತ 14ನೇ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಇತರ ಕ್ರೀಡಾಕೂಟಗಳು ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ಮತ್ತು ಯುವ ಸಮೂಹ ಸೋತು ಗೆಲ್ಲೂವ ಕ್ರೀಡಾ ಮನೋಬಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂತ ಅಂತೋಣಿ ಚರ್ಚ್ ಧರ್ಮಗುರು ರೇ.ಫಾ.ವಿಜಯ ಕುಮಾರ್ ಆಶೀರ್ವಚನ ನೀಡಿ, ಕ್ರೀಡಾಕೂಟ ಯಶಸ್ವಿಯಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಸಮಾನಮನಸ್ಕರಾಗಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂಬುದನ್ನು ಕ್ರೀಡಾಕೂಟ ನಿರೂಪಿಸಿದೆ ಎಂದು ಬಣ್ಣಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ತಂಡಕ್ಕೆ ಪ್ರಶಸ್ತಿ :: ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯಾದ್ಯಂತ 22 ತಂಡಗಳು ಪಾಲ್ಗೊಂಡಿದ್ದು ಫೈನಲ್ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಪ್ರಶಸ್ತಿ ಪಡೆದುಕೊಂಡಿತು. ಮಹಿಳೆಯರ ಥ್ರೋಬಾಲ್ ಪಂದ್ಯ ಅಬ್ಬರುಕಟ್ಟೆಯ ಸೈಂಟ್ ಲಾರೆನ್ಸ್ ಪ್ರಥಮ, ಮಡಿಕೇರಿ ಸಂತ ಮೈಕೆಲರ ತಂಡ ದ್ವಿತೀಯ ಹಾಗೂ ಪರುಷರ ಹಗ್ಗಜಗ್ಗಾಟದಲ್ಲಿ ಅಬೂರುಕಟ್ಟೆ ಪ್ರಥಮ, ಪೊನ್ನಂಪೇಟೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಹೆಗ್ಗಳ ಸೈಂಟ್ ಜಾನ್ ತಂಡ ಪ್ರಥಮ, ಮಡಿಕೇರಿಯ ಸಂತ ಮೈಕೆಲರ ತಂಡ ದ್ವಿತೀಯ ಸ್ಥಾನ ಪಡೆಯಿತು. ವೇದಿಕೆಯಲ್ಲಿ ವಿರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಸಂತ ಅನ್ನಮ್ಮ ಚರ್ಚ್‌ನ ರೇ.ಫಾ. ಜೇಮ್ ಡಾಮಿನಿಕ್, ಅಮ್ಮತ್ತಿ ಚರ್ಚ್‌ನ ಧರ್ಮಗುರುಗಳಾದ ಮದ ಮುತ್ತು, ಚೆಟ್ಟಳ್ಳಿಸಂತ ಸೆಬಾಸ್ಟಿನ್ ಚರ್ಚ್‌ನ ರೇ.ಫಾ.ಜೆರಾಲ್ಡ್ ಸಿಕ್ಕೇರ ಮೊದಲಾದವರಿದ್ದರು.










