
ಕಾರ್ಕಳ ಆ.11 NEWS DESK : ಮಾದಕ ದ್ರವ್ಯಗಳು ಯುವ ಜನತೆಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ‘ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ’ಯನ್ನು ಆಚರಿಸಲಾಯಿತು. ಕಾರ್ಕಳ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಮಾದಕ ವ್ಯಸನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಅದರಿಂದ ಜೀವ/ ಜೀವನ ಎರಡನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಮಾದಕ ವ್ಯಸನವನ್ನು ಹೋಗಲಾಡಿಸುವಲ್ಲಿ ಯುವಜನತೆಯ ಜವಾಬ್ದಾರಿ ಮಹತ್ತರವಾದುದು ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾನೂನಿನ ಮೂಲಕ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು. ಪೋಕ್ಸೋ ಕಾನೂನು, ಸಂಚಾರ ನಿಯಮಗಳ ಬಗ್ಗೆ ಅರಿವು ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆಗುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು, ದೇಶದ ಕಾನೂನಿಗೆ ನಾವೆಲ್ಲರೂ ತಲೆಬಾಗಿ ಅದನ್ನು ಪರಿಪಾಲಿಸಿದಾಗ ನಮಗೆ ಆತಂಕಗಳಿಲ್ಲ ನಾವೆಲ್ಲರೂ ಸುರಕ್ಷಿತ” ಎಂದು ನುಡಿದರು. ವೇದಿಕೆಯಲ್ಲಿ ಕಾರ್ಕಳ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಸಂತೋಷ್ ನಿರೂಪಿಸಿ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









